ಗುರುವಾರ , ಜನವರಿ 21, 2021
29 °C
ಗಡಿ ಜಿಲ್ಲೆ ಬೀದರ್‌ಗೂ ದೊರಕಿದ ಪ್ರಾತಿನಿಧ್ಯ

ಡಾ. ಶೈಲೇಂದ್ರಗೆ ಒಲಿದ ಕೈಗಾರಿಕಾ ನಿಗಮ ಅಧ್ಯಕ್ಷ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ.

ಬೆಲ್ದಾಳೆ ಅವರನ್ನು ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದ್ದು, ನಿಗಮ, ಮಂಡಳಿ ನೇಮಕದಲ್ಲಿ ಗಡಿ ಜಿಲ್ಲೆಗೂ ಪ್ರಾತಿನಿಧ್ಯ ದೊರಕಿದೆ.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗುವುದರೊಂದಿಗೆ ರಾಜಕೀಯ ಪಯಣ ಆರಂಭಿಸಿದ ಬೆಲ್ದಾಳೆ, 15 ವರ್ಷಗಳ ಅವಧಿಯಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಜಿಲ್ಲಾ ಘಟಕದ ಖಜಾಂಚಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಪಕ್ಷದ ಸಂಘಟನೆ ಬಲಪಡಿಸಲು ಶ್ರಮಿಸಿದ್ದಾರೆ. 2010 ರಲ್ಲಿ ಜಿಲ್ಲಾ ಪಂಚಾಯಿತಿಯ ಚಿಟ್ಟಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಲ್ಲಿ ಗುರುತಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಹಿಂದೆ ಬಿಜೆಪಿ ತೊರೆದು ಕೆಜೆಪಿ ರಚಿಸಿದಾಗ, ಕೆಜೆಪಿಗೆ ಸೇರಿದ್ದರು. 2013 ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ನಂತರ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದಾಗ ಇವರೂ ವಾಪಸ್ಸಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಬೀದರ್ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಯಶಸ್ಸು ಲಭಿಸಿರಲಿಲ್ಲ. ಇದೀಗ ಅವರಿಗೆ ಪಕ್ಷ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆಯನ್ನು ನೀಡಿದೆ.

ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಖುಷಿ ತಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮೇಲೆ ವಿಶ್ವಾಸ ಇರಿಸಿ ನೇಮಕ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ತರದಂತೆ ಕಾರ್ಯ ನಿರ್ವಹಿಸುವೆ ಎಂದು ಡಾ. ಶೈಲೇಂದ್ರ ಬೆಲ್ದಾಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿಗಮದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು. ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.

ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಬೀದರ್ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು