ಗುರುವಾರ , ಜುಲೈ 7, 2022
21 °C
ಮಣ್ಣು ಹಾಕಿ ಚರಂಡಿ ಮುಚ್ಚಿ ಅಂಗಡಿಗಳಿಗೆ ಹಾದಿ ಮಾಡಿಕೊಂಡ ಜನ

ಬಸವಕಲ್ಯಾಣ: ಹೂಳು ತುಂಬಿಕೊಂಡು ನಿಂತ ಚರಂಡಿ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ವಿವಿಧ ಇಲಾಖೆಗಳ ಕಚೇರಿಗಳ ಎದುರಲ್ಲಿನ ಮುಖ್ಯ ರಸ್ತೆ ಪಕ್ಕದ ಚರಂಡಿ ದುಸ್ಥಿತಿಗೆ ತಲುಪಿದೆ. ಎಲ್ಲೆಂದರಲ್ಲಿ ನೀರು ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ಆದರೂ, ಸಂಬಂಧಿಸಿದವರು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ.

ಇಲ್ಲಿನ ಚರಂಡಿ ವ್ಯವಸ್ಥೆ ನೋಡಿದರೆ, ನೀರು ಬೇರೆಡೆ ಸಾಗಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆಯೋ ಅಥವಾ ಬರೀ ವಿವಿಧ ಯೋಜನೆಗಳ ಹಣದ ವೆಚ್ಚಕ್ಕಾಗಿ ಕಾಮಗಾರಿ ನಡೆಸಲಾಗಿದೆಯೋ ಎಂದೆನಿಸುತ್ತದೆ. ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತದವರೆಗಿನ ಪ್ರದೇಶ ನಗರದ ಪ್ರಮುಖವಾದ ಹಾಗೂ ಜನನಿಬಿಡ ಸ್ಥಳವಾಗಿದೆ. ಆದರೂ, ಇಲ್ಲಿನ ಚರಂಡಿ ವ್ಯವಸ್ಥೆ ಸುಧಾರಣೆಗೆ ಯಾರೂ ಒತ್ತು ನೀಡುತ್ತಿಲ್ಲ.

ರಸ್ತೆಯ ಪೂರ್ವ ಭಾಗದಲ್ಲಿ ನೀಲಾಂಬಿಕಾ ಸರ್ಕಾರಿ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಪ ವಿಭಾಗಾಧಿಕಾರಿಗಳ ಮನೆ, ಶಾಸಕರ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗ, ತಾಲ್ಲೂಕು ಪಂಚಾಯಿತಿ ಕಚೇರಿಗಳಿದ್ದರೆ, ಪಶ್ಚಿಮಕ್ಕೆ ಶಿಕ್ಷಕರ ಸಂಘದ ಗುರುಭವನ, ತಹಶೀಲ್ದಾರ್ ಅವರ ಹಳೆ ಕಚೇರಿ, ತೋಟಗಾರಿಕೆ ಕಚೇರಿ, ಕೇಂದ್ರ ಗ್ರಂಥಾಲಯ, ಬಸವವನ ಮುಂತಾದ ಪ್ರಮುಖ ಕಚೇರಿಗಳಿವೆ. ಆದರೆ, ರಸ್ತೆಯ ಎರಡೂ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಮಾತ್ರ ಸರಿಯಿಲ್ಲ. ಕಳಪೆ ಕಾಮಗಾರಿಯ ಕಾರಣ ಅಲ್ಲಲ್ಲಿ ಸಿಮೆಂಟ್ ಕಿತ್ತಿದೆ.

‘ಇಲ್ಲಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದಲ್ಲದೆ, ಚರಂಡಿಗಳ ಸ್ವಚ್ಛತೆ ಕೈಗೊಳ್ಳದ ಕಾರಣ ಕಲ್ಲು, ಮಣ್ಣು, ಕಸ ಒಳಗೆ ತುಂಬಿಕೊಂಡಿರುತ್ತದೆ. ಕೆಲವೆಡೆ ಮಣ್ಣು ತುಂಬಿಕೊಂಡು ಚರಂಡಿ ಇದೆಯೋ ಇಲ್ಲವೋ ಎಂಬುದು ಗೊತ್ತಾಗುವುದೇ ಇಲ್ಲ. ಈ ಕಾರಣ ಮಳೆಗಾಲದಲ್ಲಿ ತ್ರಿಪುರಾಂತ ಕಡೆಯಿಂದ ಹರಿದುಬರುವ ನೀರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಾಸಕರ ಕಚೇರಿವರೆಗಿನ ಚರಂಡಿಯಲ್ಲಿ ತುಂಬಿ ತುಳುಕುತ್ತದೆ. ಗುರುಭವನದ ಭಾಗದಲ್ಲಿನ ಅಂಗಡಿಗಳಿಗೆ ನೀರು ನುಗ್ಗುತ್ತದೆ. ಆದ್ದರಿಂದ ವ್ಯಾಪಾರಸ್ಥರು ಹಾನಿ ಅನೂಭವಿಸಬೇಕಾಗುತ್ತಿದೆ’ ಎಂದು ಶಿವನಾಗಪ್ಪ ಹೇಳಿದ್ದಾರೆ.

‘ಈಚೆಗೆ ಚರಂಡಿ ಮೇಲಿನ ಹಾಸುಗಲ್ಲುಗಳನ್ನು ತೆಗೆಯಲಾಗಿತ್ತು. ಆದ್ದರಿಂದ ಸ್ವಚ್ಛತೆ ಕೈಗೊಳ್ಳಬಹುದು ಎಂದು ನಂಬಲಾಗಿತ್ತು. ಆದರೆ, ಅನೇಕ ದಿನಗಳಾದರೂ ಕ್ರಮ ತೆಗೆದುಕೊಳ್ಳದ ಕಾರಣ ಒಳಗೆ ಮಣ್ಣು ತುಂಬಿಕೊಂಡಿದೆ. ಕೆಲವರು ಅಂಗಡಿಗಳಿಗೆ ಹೋಗುವುದಕ್ಕೆ ಸ್ಥಳ ಇಲ್ಲದ್ದರಿಂದ ಕಲ್ಲು ಮಣ್ಣು ತುಂಬಿಕೊಂಡಿದ್ದಾರೆ. ಇಂಥ ಪರಿಸ್ಥಿತಿ ಅನೇಕ ಸಲ ಒದಗಿದೆ’ ಎಂದು ವ್ಯಾಪಾರಸ್ಥ ಮೈನೊದ್ದೀನ್ ದೂರಿದ್ದಾರೆ.

ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಡುತ್ತದೆ. ಆದ್ದರಿಂದ ನಗರಸಭೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.

‘ರಸ್ತೆ ನಮ್ಮ ಇಲಾಖೆಗೆ ಒಳಪಟ್ಟರೂ ನಗರಸಭೆಯವರು ಕೆಲವೆಡೆ ಚರಂಡಿ, ರಸ್ತೆ ನಿರ್ಮಿಸಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ಶರಣಗೌಡ ಪಾಟೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು