ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಜೀವಂತ ಕಲೆ

ಕಲಾವಿದ ವೈಜಿನಾಥ ಬಿರಾದಾರ ಅಭಿಮತ
Last Updated 25 ಜನವರಿ 2020, 15:07 IST
ಅಕ್ಷರ ಗಾತ್ರ

ಬೀದರ್: ‘ರಂಗಭೂಮಿ ಜೀವಂತ ಹಾಗೂ ಸಾಕ್ಷಾತ್ ಕಲೆಯಾಗಿದೆ. ಸಿನಿಮಾಗಳಲ್ಲಿ ಟೇಕ್‌ಗಳ ಮೇಲೆ ಟೇಕ್‌ ಹಾಗೂ ರೀಟೆಕ್‌ಗಳು ಇರುತ್ತವೆ. ಆದರೆ ನಾಟಕದಲ್ಲಿ ನೋ ಟೇಕ್‌, ನೋ ರಿಟೇಕ್‌. ಇಲ್ಲಿ ಅಭಿನಯದ ಮೂಲಕವೇ ಪಾತ್ರಕ್ಕೆ ಜೀವ ತುಂಬಬೇಕಾಗುತ್ತದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ವೈಜಿನಾಥ ಬಿರಾದಾರ ತೇಗಂಪೂರ ಹೇಳಿದರು.

ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಜಾನಪದ ಕಲಾವಿದರ ಬಳಗ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಣೆಹಳ್ಳಿ ಶಿವಸಂಚಾರ ತಂಡವು ಆಯೋಜಿಸಿರುವ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಮೂಲತಃ ರಂಗಭೂಮಿ ಕಲಾವಿದ. ಈವರೆಗೆ ಹತ್ತು ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. 1,500 ಏಕಪಾತ್ರ ಅಭಿನಯ ಮಾಡಿದ್ದೇನೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ’ ಎಂದು ತಿಳಿಸಿದರು.

‘ನಶಿಸಿ ಹೋಗುತ್ತಿರುವ ದೊಡ್ಡಾಟ, ಬಯಲಾಟ, ಕೋಲಾಟ, ಜನಪದ ಸಾಹಿತ್ಯ ಕಲೆಗಳು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ಕಲಾವಿದನ ಅದ್ಯ ಕರ್ತವ್ಯವಾಗಿದೆ’ ಎಂದರು.

ಶೇಖಾಪುರದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಕನ್ನಡ ಉಳಿದರೆ ನಾಡ ಸಂಸ್ಕೃತಿ ಉಳಿಯುತ್ತದೆ’ ಎಂದು ತಿಳಿಸಿದರು.

ಬಳ್ಳಾರಿಯ ಮಯೂರಿ ಬಸವರಾಜ ಮಾತನಾಡಿ, ‘ವೇದಶಾಸ್ತ್ರಗಳಲ್ಲಿ ನಾಟ್ಯಶಾಸ್ತ್ರಕ್ಕೆ ಐದನೇ ಸ್ಥಾನವಿದೆ. ಇಂದಿನ ಯುವತಿಯರು ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶಿ ಕಲೆಗಳನ್ನು ಉಳಿಸಬೇಕು’ ಎಂದು ತಿಳಿಸಿದರು.

ನಂದಿಶ್ವರ ನಾಟ್ಯ ಸಂಘದ ಅಧ್ಯಕ್ಷ ದೇವದಾಸ ಚಿಮಕೋಡೆ ಅಧ್ಯಕ್ಷತೆ ವಹಿಸಿದರು. ಉದ್ಯಮಿಗಳಾದ ಚಂದ್ರಕಾಂತ ಹೆಬ್ಬಾಳೆ, ಜಯರಾಜ ಖಂಡ್ರೆ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಓಂಕಾರ ಪಾಟೀಲ, ಶೇಖಾಪುರದ ಮಾತೆ ಶಕುಂತಲಾ ಇದ್ದರು.

ಸುನೀಲ ಭಾವಿಕಟ್ಟಿ ಸ್ವಾಗತಿಸಿದರು. ವಿಜಯಕುಮಾರ ಸೋನಾರೆ ನಿರೂಪಿಸಿದರು. ಯೇಸುದಾಸ ಅಲಿಯಂಬುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT