ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕಲುಷಿತ ನೀರು ಸೇವನೆ: 14 ಜನ ಅಸ್ವಸ್ಥ

ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ; ಡಿಎಚ್‌ಒ ಡಾ.ರತಿಕಾಂತ ಸ್ವಾಮಿ
Published 30 ಜುಲೈ 2023, 6:07 IST
Last Updated 30 ಜುಲೈ 2023, 6:07 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಬರಿದಾಬಾದ್‍ನಲ್ಲಿ ಕಳೆದೊಂದು ವಾರದಲ್ಲಿ ಕಲುಷಿತ ನೀರು ಸೇವಿಸಿ, ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿದಂತೆ ಈವರೆಗೆ ಒಟ್ಟು 14 ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಶರಣಪ್ಪ ದಶರಥ, ಕಾಶಮ್ಮ ಭೀಮಶಾ, ಸಾಯಿನಾಥ ಬಸವರಾಜ ಹಾಗೂ ಇತರರು ಸೇರಿದ್ದಾರೆ.

ವಾಂತಿ-ಭೇದಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾದವರಲ್ಲಿ ಈಗಾಗಲೇ ಬೀದರ್‌ನ ಬ್ರಿಮ್ಸ್ ಹಾಗೂ ವಾಸು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾದ ತಲಾ ಇಬ್ಬರು ಬಿಡುಗಡೆಗೊಂಡಿದ್ದಾರೆ. ಸದ್ಯ ಬ್ರಿಮ್ಸ್‌ನಲ್ಲಿ ಮೂವರು ಹಾಗೂ ವಾಸು ಆಸ್ಪತ್ರೆಯಲ್ಲಿ ಏಳು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಿದಾಬಾದ್ ಗ್ರಾಮದ ಸಂಗಮೇಶ್ವರ ದೇವಸ್ಥಾನ ಸಮೀಪ ನೀರು ಪೂರೈಕೆ ಪೈಪ್‍ಲೈನ್ ಸೋರಿಕೆ ಆಗಿರುವುದೇ ಘಟನೆಗೆ ಕಾರಣವಾಗಿದೆ. ಜುಲೈ 25ರಿಂದ ವಾಂತಿ-ಭೇದಿ ಉಲ್ಬಣಗೊಂಡಿದೆ. ಶುಕ್ರವಾರ ಹಾಗೂ ಶನಿವಾರ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ.

ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ ಹಾಗೂ ಇತರ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.

ಗ್ರಾಮದ ಒಂದು ಭಾಗದ ನೀರು ಪೂರೈಕೆ ಪೈಪ್‍ಲೈನ್ ಸೋರಿಕೆಯಿಂದಾಗಿ ವಾಂತಿ–ಭೇದಿ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಮಾಹಿತಿ ನೀಡಿದ್ದಾರೆ.

ಜುಲೈ 25ರಂದು ಎರಡು ಸೌಮ್ಯ ಪ್ರಕರಣಗಳು ವರದಿಯಾಗಿದ್ದವು. 26ರಂದು ನೀರಿನ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ವರದಿ ಬಂದಿದ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ದೃಢಪಟ್ಟಿದೆ. ಪೈಪ್‍ಲೈನ್ ಸೋರಿಕೆಯಾದ ಮಾರ್ಗದಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ನಿಯಂತ್ರಿಸಲು ಈಗಾಗಲೇ ಎಲ್ಲ ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಒಂದು ಆಂಬುಲೆನ್ಸ್ ಇರಿಸಲಾಗಿದೆ. ವೈದ್ಯ ಸೇರಿ ಐವರು ಸಿಬ್ಬಂದಿ ದಿನದ 24 ಗಂಟೆ ಸ್ಥಳದಲ್ಲಿದ್ದಾರೆ. ಪ್ರಕರಣಗಳು ನಿಯಂತ್ರಣಕ್ಕೆ ಬರುವವರೆಗೂ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಬ್ರಿಮ್ಸ್‌ಗೆ ಜಿಲ್ಲಾಧಿಕಾರಿ ಭೇಟಿ: ವಾಂತಿ-ಭೇದಿಯಿಂದಾಗಿ ಬ್ರಿಮ್ಸ್‌ಗೆ ದಾಖಲಾದ ಬರಿದಾಬಾದ್‍ನ ರೋಗಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್. ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ವಾಂತಿ-ಭೇದಿಯಿಂದ ಬೀದರ್‍ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾದ ಬರಿದಾಬಾದ್‍ನ ರೋಗಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್ ಶನಿವಾರ ಭೇಟಿ ಮಾಡಿದರು
ವಾಂತಿ-ಭೇದಿಯಿಂದ ಬೀದರ್‍ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾದ ಬರಿದಾಬಾದ್‍ನ ರೋಗಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್ ಶನಿವಾರ ಭೇಟಿ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT