ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಸಿಗದ ಕುಡಿಯುವ ನೀರಿಗೆ ಹೈರಾಣು

Last Updated 3 ಮೇ 2022, 4:51 IST
ಅಕ್ಷರ ಗಾತ್ರ

ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ವಿಜಯನಗರ ತಾಂಡಾ (ಬಾರ್ಡರ್) ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ತಾಂಡಾದಿಂದ ಕೇವಲ 1 ಕಿ.ಮೀ. ಅಂತರದಲ್ಲಿ ಇರುವ ತೆಲಂಗಾಣ ರಾಜ್ಯದ ಗ್ರಾಮಗಳ ನಿವಾಸಿಗಳು ಉತ್ತಮ ಸೌಲಭ್ಯ ಹೊಂದಿದ್ದಾರೆ. ಅಲ್ಲಿನ ಸರ್ಕಾರ ರಸ್ತೆ, ನೀರು, ಕೆರೆಯಂತಹ ಸೌಕರ್ಯಗಳನ್ನು ಕಲ್ಪಿಸಿದೆ. ಆದರೆ, ನಮ್ಮ ತಾಂಡಾ ಜನರಿಗೆ ಕನಿಷ್ಠ ಕುಡಿಯಲು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಜನ ಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ತಾಂಡಾದಲ್ಲಿ ಸುಮಾರು 1,500 ಜನಸಂಖ್ಯೆ ಹೊಂದಿದೆ. ಜಾನುವಾರು ಸಾಕಾಣಿಕೆ ಮೂಲ ಉದ್ಯೋಗ. ಆದರೆ, ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲ’ ಎಂದು ತಾಂಡಾ ನಿವಾಸಿ ಪಂಢರಿ ಹೇಳುತ್ತಾರೆ.

‘ಇರುವ ಎರಡು ಕೊಳವೆ ಬಾವಿ ಪೈಕಿ ಒಂದು ಬತ್ತಿ ಹೋಗಿದೆ. ಒಂದರಲ್ಲಿ ಸ್ವಲ್ಪ ನೀರು ಬರುತ್ತದೆ. ಅದೂ ಎಲ್ಲರಿಗೂ ಸಾಕಾಗುತ್ತಿಲ್ಲ. ಹೀಗಾಗಿ ಪಕ್ಕದ ತೆಲಂಗಾಣ ರಾಜ್ಯದ ಗ್ರಾಮವೊಂದರ ತೋಟದ ಬಾವಿ ಮಾಲೀಕರ ಬಳಿ ಬೇಡಿಕೊಂಡು ನೀರು ತರುತ್ತಿದ್ದೇವೆ. ಈಚೆಗೆ ‘ಪ್ರಜಾವಾಣಿ’ ನಡೆಸಿದ್ದ ಫೋನ್-ಇನ್ ಕಾರ್ಯಕ್ರಮದ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೂ ತರಲಾಗಿದೆ. ಆದರೂ ನಮ್ಮ ಊರಿನ ಸಮಸ್ಯೆ ನಿವಾರಣೆಯಾಗಿಲ್ಲ’ ಎಂದು ಅವರು ದೂರಿದರು.

‘ಬಾರ್ಡರ್ ತಾಂಡಾ ಸೇರಿದಂತೆ ಜಮಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮ ಮತ್ತು ತಾಂಡಾಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಪ್ರತಿ ಬೇಸಿಗೆಯಲ್ಲಿ ಕೊಳವೆ ಬಾವಿ ಕೊರೆದು ಲಕ್ಷಾಂತ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ, ಸಮಸ್ಯೆ ಮಾತ್ರ ಜೀವಂತವಾಗಿ ಉಳಿಯುತ್ತಿದೆ’ ಎಂದು ಗ್ರಾಮ ಪಂಚಾ ಯಿತಿ ಸದಸ್ಯ ವಿಠಲರಾವ ಹೇಳುತ್ತಾರೆ.

‘ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪಕ್ಕದ ಕಂದಗೂಳ ಬಳಿಯ ಮಾಂಜ್ರಾ ನದಿಯಿಂದ ನೀರು ತರುವ ಯೋಜನೆ ರೂಪಿಸಲು ಅನೇಕ ಬಾರಿ ಮನವಿ ಮಾಡಲಾಗಿದೆ. ಕೇವಲ 5 ಕಿ.ಮೀ ಅಂತರದ ಯೋಜನೆ ಜಾರಿಯಾದರೆ ಅನೇಕ ಹಳ್ಳಿಗಳ ಸಮಸ್ಯೆಗೆ ಪರಿಹಾರವಾಗಲಿದೆ. ಈ ಕುರಿತು ಸಚಿವ ಪ್ರಭು ಚವಾಣ್ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ತಿಳಿಸಿದರು.

ಜಮಗಿಯಲ್ಲಿನ ಕೆರೆ ದುರಸ್ತಿ ಮಾಡಿದರೆ ರೈತರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಸಂಬಂಧಿತ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಈ ಸಮಸ್ಯೆಗೂ ಪರಿಹಾರ ಸಿಗದ ಕಾರಣ ಜನರು ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.‌

ವಿಜಯನಗರ ತಾಂಡಾದಲ್ಲಿ ನೀರಿನ ಕೊರತೆಯಾಗಿದೆ. ಅಲ್ಲಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದಿಲ್ಲ. ಹಾಗಾಗಿ, ಟ್ಯಾಂಕರ್ ನೀರು ಪೂರೈಸಲು ಮೇಲಾಧಿಕಾರಿಗಳ ಅನುಮತಿ ಕೇಳಲಾಗಿದೆ’ ಎಂದು ಪಿಡಿಒ ಮಹೆಬೂಬ್ ಪಾಷಾ ತಿಳಿಸಿದರು.

*
ವಿಜಯನಗರ ತಾಂಡಾ ಸುತ್ತಲೂ ನೀರಿನ ಮೂಲ ಇಲ್ಲ. ಕೊಳವೆ ಬಾವಿ ಕೊರೆದರೂ ಪ್ರಯೋಜನವಾಗದು. ಈ ಕಾರಣ ಅಲ್ಲಿ ಟ್ಯಾಂಕರ್ ನೀರು ಪೂರೈಸಬೇಕಾಗುತ್ತದೆ.
-ಮಹೆಬೂಬ್ ಪಾಷಾ, ಪಿಡಿಒ ಜಮಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT