ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ತಪ್ಪದ ನೀರಿನ ಬವಣೆ, ಮಹಿಳೆಯರ ಅಲೆದಾಟ

Last Updated 22 ಮೇ 2020, 19:30 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿರುವ ಸಂತಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸ್ಥಳೀಯರು ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಸಂತಪುರ ಗ್ರಾಮವು ಸುಮಾರು 10 ಸಾವಿರ ಜನಸಂಖ್ಯೆ ಹೊಂದಿದ್ದು, ಇಲ್ಲಿನ ಜನರು ಕುಡಿಯುವ ನೀರಿಗಾಗಿ ನಿತ್ಯ ಅಲೆದಾಡುತ್ತಿದ್ದಾರೆ. ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನ ಗೊಳಿಸಿ ಎಂದು ಸ್ಥಳೀಯರು ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕೆಲ ವರ್ಷಗಳ ಹಿಂದೆ ಜಲ ನಿರ್ಮಲ ಯೋಜನೆಯಡಿ ಸಂತಪುರ ಹಾಗೂ ಸುತ್ತಲಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಕಾರ್ಯಗತಗೊಳಿಸಲಾಗಿದೆ. ಚಂದಾಪುರ ಬಳಿ ನದಿಯಿಂದ ಪೈಪ್‌ಲೈನ್‌ ಅಳವಡಿಸಲಾಗಿದೆ. ನೀರು ಸಂಗ್ರಹಿಸಲು ಟ್ಯಾಂಕ್ ಕೂಡ ನಿರ್ಮಿಸಲಾಗಿದೆ. ಆದರೆ ಅದರಿಂದ ಜನರಿಗೆ ಮಾತ್ರ ನೀರು ಸಿಕ್ಕಿಲ್ಲ ಎಂದು ಸಂತಪುರ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬೇಸಿಗೆ ಮೂರು ತಿಂಗಳು ಸಂತಪುರ ಜನ ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ. ಕೆಲ ಕಡೆ ಕೊರೆದ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ಆದರೆ ಅವುಗಳಲ್ಲಿ ನೀರು ಕಮ್ಮಿಯಾಗಿ ಜನರಿಗೆ ಕುಡಿಯಲು ನೀರು ಸಿಗದಂತಾಗಿದೆ.

‘ನಮ್ಮ ಗಲ್ಲಿಯಲ್ಲಿ ಎರಡು ವಾರದಿಂದ ನೀರು ಬರುತ್ತಿಲ್ಲ. ಈ ಲಾಕ್‌ಡೌನ್‌ ಕೆಲಸ ಇಲ್ಲದೆ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿದೆ. ಈ ಸಮಯದಲ್ಲಿ ನಾವು ನೀರು ಖರೀದಿಸಿ ತರಬೇಕಾದ ಅನಿವಾರ್ಯತೆ ಎದುರಾಗಿದೆ' ಎಂದು ಜನತಾ ಕಾಲೊನಿ ನಿವಾಸಿ ಈಟಾಬಾಯಿ ಮತ್ತು ವಿದ್ಯಾವತಿ ಹೇಳುತ್ತಾರೆ.

'ಪ್ರತಿ ವರ್ಷ ಮಾರ್ಚ್‌ನ್ಲಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರು. ಆದರೆ ಈ ವರ್ಷ ಬೇಸಿಗೆ ಮುಗಿಯುತ್ತ ಬಂದರೂ ನೀರಿನ ವ್ಯವಸ್ಥೆ ಮಾಡಿಲ್ಲ. ಪಂಚಾಯಿತಿಗೆ ಹೋಗಿ ಸಾಕಷ್ಟು ಸಲ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ‘ ಎಂದು ಕಾಲೊನಿಯ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

'ಜನತಾ ಕಾಲೊನಿ, ನವನಗರ, ಪರಿಶಿಷ್ಟ ಜಾತಿಗಲ್ಲಿ ಸೇರಿದಂತೆ ಊರಿನ ಬಹುತೇಕ ಕಡೆ ನೀರಿಲ್ಲದೆ ಜನ ಸಂಕಷ್ಟದಲ್ಲಿದ್ದಾರೆ' ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.

'ಜಲನಿರ್ಮಲ ಯೋಜನೆಯಡಿ ಕೋಟ್ಯಂತರ ಅನುದಾನ ಖರ್ಚು ಆದರೂ ನಮ್ಮ ಊರಿಗೆ ನೀರು ಸಿಕ್ಕಿಲ್ಲ. ಆ ಯೋಜನೆ ಬಗ್ಗೆ ಏನಾಯಿತು ಎಂಬುದು ಜನರಿಗೆ ಸತ್ಯ ಸಂಗತಿ ತಿಳಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

'ಸಂತಪುರ ಜಲನಿರ್ಮಲ ಯೋಜನೆ ಕುರಿತಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು, ಮಾಹಿತಿ ಕೇಳಿ ಖುದ್ದಾಗಿ ಪರಿಶೀಲಿಸಿದ್ದಾರೆ. ಅಗತ್ಯ ರಿಪೇರಿ ಮಾಡಿದರೆ ನೀರು ಪೂರೈಸಲು ಸಾಧ್ಯವೆ ಎಂಬುದರ ಕುರಿತು ತಾಂತ್ರಿಕ ಪರಿಣತರ ಸಲಹೆ ಕೇಳಿದ್ದಾರೆ' ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದ್ದಾರೆ.

'ಸಂತಪುರದ ಕೆಲ ಕಡೆ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT