ಭಾನುವಾರ, ಅಕ್ಟೋಬರ್ 25, 2020
22 °C
ರಾಷ್ಟ್ರಮಟ್ಟದಲ್ಲಿ ಶೇ 1 ರಷ್ಟು ವೈದ್ಯಕೀಯ ಸೀಟು ಗುರಿ: ಅಬ್ದುಲ್ ಖದೀರ್

ನೀಟ್ ಸಾಧಕರಿಗೆ ‘ಶಾಹೀನ್’ ದುಬೈ ಟೂರ್ ಪ್ಯಾಕೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ತನ್ನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಸಾಧಕರಿಗೆ ಉಚಿತ ದುಬೈ ಟೂರ್ ಪ್ಯಾಕೇಜ್ ಪ್ರಕಟಿಸಿದೆ.

ಪ್ರಸಕ್ತ ಸಾಲಿನ ನೀಟ್‍ನಲ್ಲಿ 9ನೇ ರ್‍ಯಾಂಕ್ ಪಡೆದ ಬೀದರ್‌ನ ಕಾರ್ತಿಕ ರೆಡ್ಡಿ, 85ನೇ ರ್‍ಯಾಂಕ್ ಗಳಿಸಿದ ಬಸವಕಲ್ಯಾಣದ ಎಂ.ಡಿ. ಅರ್ಬಾಜ್ ಅಹಮ್ಮದ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ದುಬೈ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕಾರ್ತಿಕ ರೆಡ್ಡಿ ನೀಟ್‍ನಲ್ಲಿ 720 ಅಂಕಗಳ ಪೈಕಿ 710 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಎಂ.ಡಿ. ಅರ್ಬಾಜ್ ಅಹಮ್ಮದ್ 700 ಅಂಕಗಳನ್ನು ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬೀದರ್ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ನೀಟ್ ಬಂದ ಮೇಲೆ ಶಾಹೀನ್ ಕಾಲೇಜು ಗಳಿಸುವ ಸರ್ಕಾರಿ ಕೋಟಾದ ಉಚಿತ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚುತ್ತಲೇ ನಡೆದಿದೆ. ಕಳೆದ ವರ್ಷ ಕಾಲೇಜು 327 ಸೀಟುಗಳನ್ನು ಪಡೆದಿತ್ತು. ಪ್ರಸಕ್ತ ವರ್ಷ 400 ಸೀಟುಗಳು ಲಭಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಳೆದ ವರ್ಷ ಕಾಲೇಜು ರಾಜ್ಯದ ಸರ್ಕಾರಿ ಕೋಟಾದ ಒಟ್ಟು ಸೀಟುಗಳ ಪೈಕಿ ಶೇ 8.32 ರಷ್ಟು ಸೀಟುಗಳನ್ನು ಗಿಟ್ಟಿಸಿತ್ತು. ಈಗ ಶೇ 10 ರಷ್ಟು ಸೀಟುಗಳನ್ನು ಪಡೆಯುವ ಗುರಿ ಇದೆ. ನೀಟ್‍ನಲ್ಲಿ ರಾಷ್ಟ್ರಮಟ್ಟದ ಸೀಟುಗಳ ಪೈಕಿ ಶೇ 0.7 ರಷ್ಟನ್ನು ಪಡೆದಿದ್ದು, ಶೇ 1 ರಷ್ಟು ಸೀಟುಗಳನ್ನು ಗಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಶಾಹೀನ್ ಕಾಲೇಜು ಮೊದಲಿನಿಂದಲೂ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುತ್ತ ಬಂದಿದೆ. 8 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ತಲಾ 100 ರಂತೆ 800 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷ 111 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಒದಗಿಸಲಾಗಿದೆ. ಕೋವಿಡ್‌ ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡ ಮೂವರು ವಿದ್ಯಾರ್ಥಿಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಾಹೀನ್ ಕಾಲೇಜಿನಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಇದೆ. ನುರಿತ, ಅನುಭವಿ ಉಪನ್ಯಾಸಕರು ಇದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜತೆಗೆ ಜೀವನಮೌಲ್ಯಗಳನ್ನೂ ಹೇಳಿಕೊಡಲಾಗುತ್ತಿದೆ. ಸರ್ವ ಜಾತಿ, ಧರ್ಮಗಳ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ ಎಂದರು.

ಕಾರ್ತಿಕ ರೆಡ್ಡಿ ಅವರ ತಂದೆ ಬಿ. ರಾಮರೆಡ್ಡಿ, ತಾಯಿ ಕಲ್ಪನಾ, ಎಂ.ಡಿ. ಅರ್ಬಾಜ್ ಅಹಮ್ಮದ್ ಅವರ ತಂದೆ ಮಹಮ್ಮದ್ ಸಲಿಮೊದ್ದೀನ್ ಹಾಗೂ ಶಾಹೀನ್‌ ಸಿಇಒ ತೌಸಿಫ್ ಇದ್ದರು.

ಎಚ್‍ಒಡಿಯಿಂದ ವಿದ್ಯಾರ್ಥಿಗಳಿಗೆ ತಲಾ ₹ 10 ಸಾವಿರ ಬಹುಮಾನ

ಬೀದರ್: ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಸತೀಶ ಪುಟ್ಟಾ ಅವರು ನೀಟ್‍ನಲ್ಲಿ ಕ್ರಮವಾಗಿ 9 ಹಾಗೂ 85ನೇ ರ್‍ಯಾಂಕ್ ಪಡೆದ ಕಾರ್ತಿಕ ರೆಡ್ಡಿ ಹಾಗೂ ಎಂ.ಡಿ. ಅರ್ಬಾಜ್ ಅವರಿಗೆ ತಲಾ ₹ 9,999 ಬಹುಮಾನ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ಮೊತ್ತದ ಚೆಕ್ ಹಸ್ತಾಂತರಿಸಿದರು.

‘ನೀಟ್‍ನಲ್ಲಿ ಒಂದಂಕಿ ಅಥವಾ ಎರಡಂಕಿಯಲ್ಲಿ ರ್ಯಾಂಕ್ ಪಡೆದವರಿಗೆ ನಗದು ಬಹುಮಾನ ಕೊಡುವುದಾಗಿ ಹೇಳಿದ್ದೆ. ಒಬ್ಬರು ಒಂದಂಕಿ ಹಾಗೂ ಇನ್ನೊಬ್ಬರು ಎರಡಂಕಿಯಲ್ಲಿ ರ್‍ಯಾಂಕ್ ಪಡೆದಿದ್ದರಿಂದ ಇಬ್ಬರಿಗೂ ಬಹುಮಾನ ಕೊಟ್ಟಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು