ಗುಂಡು ಅತಿವಾಳ
ಹುಮನಾಬಾದ್ : ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ದುಬಲಗುಂಡಿ ಗ್ರಾಮದಲ್ಲಿ ಸರಿಯಾದ ಬಸ್ ಸೌಕರ್ಯವಿಲ್ಲ. ಶಿಕ್ಷಣಕ್ಕೆ, ವ್ಯಾಪಾರಕ್ಕೆ, ವಾಣಿಜ್ಯ ಚಟುವಟಿಕೆಗಳಿಗೆ ಬೇರೆಡೆ ಪ್ರಯಾಣ ಮಾಡಲು ಜನ ಪರದಾಡುವಂತಾಗಿದೆ.
ಅದರಲ್ಲೂ ತಾಲ್ಲೂಕು ಕೇಂದ್ರ ಹುಮನಾಬಾದ್ , ಹಳ್ಳಿಖೇಡ್ ಬಿ. ಪಟ್ಟಣಗಳಿಗೆ ಮೇಲಿಂದ ಮೇಲೆ ಸಂಚರಿಸುವ ಜನರಿಗೆ ಹೇಳಲಾಗದಷ್ಟು ತೊಂದರೆಯಾಗುತ್ತಿದೆ.
ತಹಶೀಲ್ದಾರ್ ಕಚೇರಿ, ಕಂದಾಯ ನಿರೀಕ್ಷಕ , ಪದವಿಪೂರ್ವ, ಪ್ರೌಢಶಾಲೆ ಸೇರಿದಂತೆ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳಿಗೆ ಬರುವ ಸಿಬ್ಬಂದಿ ಸಾಕಷ್ಟಿದ್ದಾರೆ. ದಿನನಿತ್ಯ ಊರಿಂದ ಊರಿಗೆ ಉದ್ಯೋಗಕ್ಕೆ ಅಲದಾಡುತ್ತಿರುವ ನೌಕರರು, ವ್ಯಾಪಾರ ಉದ್ಯೋಗಗಳಿಗಾಗಿ ಬರುವ ರೈತರು, ಮಹಿಳೆಯರು ಪಟ್ಟಣಕ್ಕೆ ಪ್ರಯಾಣಿಸಲು ಹೈರಾಣು ಆಗುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಕಚೇರಿಯಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತರೆ ಭಾಲ್ಕಿ ಹುಮನಾಬಾದ್ ಬಸಗಳಲ್ಲಿ ಜನದಟ್ಟಣೆ ಇರುತ್ತದೆ. ಹೀಗಾಗಿ ಕೆಲ ಒಂದೊಂದು ಬಾರಿ ಬಸ್ ಸಹ ನಿಲ್ಲಿಸುವುದಿಲ್ಲ. ಈ ಸಮಸ್ಯೆಯನ್ನು ಜನಪ್ರತಿನಿಧಿಗಳು ಶೀಘ್ರ ಬಗೆಹರಿಸಬೇಕು ಎಂದು ನಿತ್ಯವೂ ಪ್ರಯಾಣಿಸುವ ನೌಕರರು ಮತ್ತು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ 9 ಮತ್ತು ಸಂಜೆ 5 ಗಂಟೆಗೆ ಇನ್ನು ಹೆಚ್ಚುವರಿ ಬಸ್ ಮಾಡಿಸಬೇಕೆಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
ದುಬಲಗುಂಡಿ ಗ್ರಾಮಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಬೇಡಿಕೆ ಇದೆ. ಈಗಾಗಲೇ ಶಾಸಕರ ಗಮನಕ್ಕೂ ತರಲಾಗಿದೆ. ಸ್ಥಳದ ಸಮಸ್ಯೆ ಇದ್ದು ಸೂಕ್ತ ಸ್ಥಳವೊಂದು ನೋಡಿ ಬಸ್ ನಿಲ್ದಾಣ ನಿರ್ಮಾಣ ಮಾಡಿಸಲಾಗುವುದು
-ನಾಗರಾಜ ಭೋಜಗುಂಡಿ ಗ್ರಾಪಂ ಅಧ್ಯಕ್ಷ ದುಬಲಗುಂಡಿ
ಬಸ್ ನಿಲ್ದಾಣ ಅತ್ಯಂತ ಅವಶ್ಯಕವಾಗಿದೆ. ಈಗಿರುವ ನಿಲ್ದಾಣದಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಆದಷ್ಟು ಬೇಗ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು
-ಪರಮೇಶ್ವರ ಕಾಳಮದರಗಿ ಗ್ರಾಮದ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.