ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ ಹಣ್ಣು ತಿನ್ನುತ್ತ ಗ್ರಹಣ ವೀಕ್ಷಣೆ

ನೆಹರೂ ಕ್ರೀಡಾಂಗಣದಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ: ಕೆಲ ಕಡೆ ಉಪಾಹಾರ ಸೇವನೆ
Last Updated 25 ಅಕ್ಟೋಬರ್ 2022, 16:17 IST
ಅಕ್ಷರ ಗಾತ್ರ

ಬೀದರ್: ಗ್ರಹಣದ ಕುರಿತಾಗಿ ಇರುವ ಮೂಢನಂಬಿಕೆ ಹೋಗಲಾಡಿಸಲು ಮಠಾಧೀಶರು, ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗರದಲ್ಲಿ ಮಂಗಳವಾರ ಬಾಳೆ ಹಣ್ಣು ತಿನ್ನುತ್ತ ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಅಗಸ್ತ್ಯ ಫೌಂಡೇಷನ್ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ವತಿಯಿಂದ ನೆಹರೂ ಕ್ರೀಡಾಂಗಣದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಜನ ಟೆಲಿಸ್ಕೋಪ್ ಹಾಗೂ ಕನ್ನಡಕ ಬಳಸಿ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.

ನಗರದ ಆಗಸದಲ್ಲಿ ಸೂರ್ಯಗ್ರಹಣ ಸಂಜೆ 4.57ಕ್ಕೆ ಆರಂಭವಾಗಿ, ಸಂಜೆ 5.51ಕ್ಕೆ ಕೊನೆಗೊಂಡಿತು. 51 ನಿಮಿಷಗಳವರೆಗೆ ಗ್ರಹಣ ಇತ್ತು. ಗ್ರಹಣದ ಕಾರಣ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಅನೇಕರು ಗ್ರಹಣ ಮುಕ್ತಾಯಗೊಳ್ಳುವವರೆಗೂ ಮನೆಯಿಂದ ಹೊರಗೆ ಬರಲಿಲ್ಲ.

ಗ್ರಹಣದ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸೂರ್ಯಗ್ರಹಣ ವೀಕ್ಷಣೆ ಹಾಗೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ತಿಳಿಸಿದರು.

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುವ, ಇರುವ ಕಾಲವನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಸೂರ್ಯಗ್ರಹಣ ನಿಸರ್ಗದ ಸಹಜ ಕ್ರಿಯೆ. ಅದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ಅಗಸ್ತ್ಯ ಫೌಂಡೇಷನ್ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ಜಿಲ್ಲಾ ಸಂಯೋಜಕ ಬಾಬುರಾವ್ ಸಾಳಸಾರೆ ತಿಳಿಸಿದರು.

ಬರಿಗಣ್ಣಿನಿಂದ ಗ್ರಹಣ ವೀಕ್ಷಣೆಯಿಂದ ನೇತ್ರ ದೋಷ ಉಂಟಾಗುತ್ತದೆ. ಕಾರಣ, ವಿಶೇಷ ಕನ್ನಡಕ ಬಳಸಿಯೇ ಗ್ರಹಣ ವೀಕ್ಷಣೆ ಮಾಡಬೇಕು ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ಪ್ರೊ. ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ, ಸುರೇಶ ಟಾಳೆ, ಸಂಗಶೆಟ್ಟಿ ಹಲಬುರ್ಗೆ, ಶ್ರೀನಿವಾಸ ರೆಡ್ಡಿ, ಪ್ರಶಾಂತ ರಾಗಾ, ಬಾಬುರಾವ್ ಮಜಗೆ ಹಾಗೂ ಗೋವಿಂದ ಪೂಜಾರಿ ಇದ್ದರು.

‘ತಪ್ಪು ಕಲ್ಪನೆ ಬೇಡ’

ಔರಾದ್: ‘ಗ್ರಹಣದ ಕುರಿತು ಜನರು ತಪ್ಪು ಕಲ್ಪನೆ ಮಾಡಿಕೊಳ್ಳಬಾರದು’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಟಂಕಸಾಲೆ ಹೇಳಿದರು.

ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಸುಭಾಷಚಂದ್ರ ಬೋಸ್ ಯುವಕ ಸಂಘ ಆಯೋಜಿಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಗ್ರಹಣ ಎನ್ನುವುದು ಪ್ರಾಕೃತಿಕವಾಗಿ ನಡೆಯುವ ಒಂದು ಸಹಜ ಪ್ರಕ್ರಿಯೆ. ಆದರೆ ಇದನ್ನು ನಾವು ತಪ್ಪು ಕಲ್ಪಿಸಿಕೊಂಡು ಈ ವೇಳೆ ಊಟ ಮಾಡಬಾರದು. ಹೊರಗೆ ಬರಬಾರದು. ಮನೆಯಲ್ಲಿನ ನೀರು ಚೆಲ್ಲಬೇಕು ಎಂದು ಅವೈಜಾನಿಕವಾಗಿ ನಡೆದುಕೊಂಡು ಬಂದಿದ್ದೇವೆ. ನಾವೆಲ್ಲ ಈಗ ಇದನ್ನು ಬಿಟ್ಟು ಗ್ರಹಣದ ಬಗ್ಗೆ ವಾಸ್ತವ ತಿಳಿದುಕೊಳ್ಳಬೇಕು’ ಎಂದರು.

‘ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ’ ಎಂದು ಅವರು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಜಗನ್ನಾಥ ಮೂಲಗೆ, ಶಿವಾಜಿರಾವ ಪಾಟೀಲ, ಕೃಷ್ಣ ಪಾಟೀಲ, ಸೋಪಾನರಾವ ಡೊಂಗರೆ, ರವಿ ಡೋಳೆ, ಸುನೀಲ ಮಿತ್ರಾ, ಪ್ರಕಾಶ ಕಾಂಬಳೆ, ಬಬ್ಲುಶಾ, ರಾಹುಲ್ ಜಾಧವ, ಶಾದುಲ್ ಅವರು ಕನ್ನಡಕದ ಮೂಲಕ ಸೂರ್ಯ ಗ್ರಹಣ ವೀಕ್ಷಿಸಿದರು.

ಮೊಬೈಲ್‌ನಲ್ಲಿ ಸೆರೆ

ಬಸವಕಲ್ಯಾಣ: ತಾಲ್ಲೂಕಿನ ಎಲ್ಲೆಡೆ ಮಂಗಳವಾರ ಸೂರ್ಯಗ್ರಹಣ ಕಂಡು ಬಂದಿದೆ. ಅನೇಕರು ಈ ದೃಶ್ಯವನ್ನು ಕ್ಯಾಮೆರಾ ಮತ್ತು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಕಂಡುಬಂತು.

ಗ್ರಹಣದ ಕಾರಣ ದೀಪಾವಳಿಯ ಅಂಗಡಿಗಳ ಹಾಗೂ ಇತರೆ ಪೂಜೆ ನಡೆಯಲಿಲ್ಲ. ನಗರದಲ್ಲಿನ ಅನೇಕ ಅಂಗಡಿಗಳನ್ನು ಬೆಳಿಗ್ಗೆಯಿಂದಲೇ ಬಂದ್ ಇಡಲಾಗಿತ್ತು. ಆದ್ದರಿಂದ ವ್ಯಾಪಾರ–ವಹಿವಾಟು ನಡೆಯಲಿಲ್ಲ. ಮಧ್ಯಾಹ್ನದಿಂದ ಜನಸಂಚಾರ ಇರಲಿಲ್ಲ. ಆದ್ದರಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಗ್ರಾಮೀಣ ಭಾಗದಲ್ಲಿ ಕೆಲವೆಡೆ ಗ್ರಹಣ ಕಾಲದಲ್ಲಿ ವಿವಿಧ ಆಚರಣೆಗಳು ನಡೆದವು. ತಾಲ್ಲೂಕಿನ ಅತ್ಲಾಪುರದಲ್ಲಿ ಒನಕೆಯನ್ನು ನೆಲದ ಮೇಲೆ ನಿಲ್ಲಿಸಲಾಗಿತ್ತು. ಗ್ರಹಣದ ನಂತರ ಅನೇಕರು ಸ್ನಾನ ಮಾಡಿದರು. ಮನೆ ಸ್ವಚ್ಛ ಮಾಡಿದರು.

ಉಪಾಹಾರ ಸೇವನೆ

ಹುಮನಾಬಾದ್: ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ಸೂರ್ಯ ಗ್ರಹಣದ ಸಂದರ್ಭದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಉಪಾಹಾರ ಸೇವಿಸಿದರು.

ನಂತರ ಪ್ರಮುಖರು ಮಾತನಾಡಿ,‘ಮೂಢನಂಬಿಕೆ ತೊಡೆದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ನಾಗರಿಕರು ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು. ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವೀರಪ್ಪ ಧುಮ್ಮನಸೋರ, ಅರ್ಜುನ್ ಸಾಗರ, ಈಶ್ವರ ಸೋನಕೇರಾ, ರಾಹುಲ್ ಜಾನವೀರ, ಸಂಜು, ಅವಿನಾಶ ಬಿದರಿ, ಶಾಂತು ಸಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT