ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day: ಗೊಗ್ಗವ್ವೆ ಕೆರೆಗೆ ಜೀವ ಕೊಟ್ಟ ಗ್ರಾಮಸ್ಥರು

ಕೆರೆಯ ಹೂಳೆತ್ತಿದ ನಂತರ ಹಸಿರು ಹೊದ್ದ ಧೂಪತಮಹಾಗಾಂವ
Last Updated 4 ಜೂನ್ 2021, 20:03 IST
ಅಕ್ಷರ ಗಾತ್ರ

ಬೀದರ್‌: ಔರಾದ್‌ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮಸ್ಥರು ಕಳೆದ ವರ್ಷದ ಲಾಕ್‌ಡೌನ್‌ ಸಮಯ
ವನ್ನು ಸದ್ಬಳಕೆ ಮಾಡಿಕೊಂಡು ಪುರಾತನ ಕೆರೆಗೆ ಕಾಯಕಲ್ಪ ನೀಡಿ ಪರಿಸರಕ್ಕೆ ಜೀವ ಕಳೆ ತುಂಬಿದ್ದಾರೆ. 12ನೇ ಶತಮಾನದಲ್ಲಿ ನಿರ್ಮಿಸಿದ್ದ ಈ ಕೆರೆಯ ಒಡ್ಡುಬಹಳ ವರ್ಷಗಳ ಹಿಂದೆ ಒಡೆದು ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಅಂತರ್ಜಲ ಮಟ್ಟವೂ ಕುಸಿದು ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಕಾರಣವಾಗಿತ್ತು.

ಧೂಪತಮಹಾಗಾಂವ ಪಿಡಿಒ ಶಿವಾನಂದ ಔರಾದೆ ಅವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಅನುಮತಿ ಪಡೆದು ಕೆರೆ ಹೂಳೆತ್ತುವ ಪ್ರಸ್ತಾವವನ್ನು ಗ್ರಾಮಸ್ಥರ ಮುಂದಿಟ್ಟರು. ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದಕ್ಕೆ ಒಪ್ಪಿಗೆ ಸೂಚಿಸಿ ತಡ ಮಾಡದೆ ಹೂಳೆತ್ತುವ ಕಾಮಗಾರಿಯನ್ನೂ ಆರಂಭಿಸಿ ಅಚ್ಚುಕಟ್ಟಾಗಿ ಒಡ್ಡು ನಿರ್ಮಿಸಿದರು. ಇದೇ ಅವಧಿಯಲ್ಲಿ ಗ್ರಾಮದ ಎರಡು ಹಳೆಯ ಬಾವಿಗಳ ಹೂಳು ತೆಗೆದು ಸ್ವಚ್ಛಗೊಳಿಸಿದರು.

ಕಳೆದ ವರ್ಷ ಚೆನ್ನಾಗಿ ಮಳೆ ಬಂದ ಕಾರಣ ಕೆರೆ ಭರ್ತಿಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಗ್ರಾಮದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರು ಬಂದಿದೆ. ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ಪಂಚಾಯಿತಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ಮೇಲೆ ಪಾದಚಾರಿ ರಸ್ತೆ ನಿರ್ಮಾಣ ಮಾಡಿ ಕೆರೆಯ ಪಕ್ಕದಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಸಮೀಪದಲ್ಲಿ ಒಂದು ಚಿಕ್ಕ ಉದ್ಯಾನವನ್ನೂ ನಿರ್ಮಿಸುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರ ಒಗ್ಗಟ್ಟಿನ ಮಂತ್ರ ಇನ್ನಷ್ಟು ಬಲ ನೀಡಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 65 ಜನರು ಸತತ 80 ದಿನಗಳ ವರೆಗೆ ಕೆಲಸ ಮಾಡಿ ಕೆರೆಯ ಹೂಳು ತೆಗೆದಿದ್ದಾರೆ. ಕೆರೆಗೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಪಕ್ಕದಲ್ಲಿ ಎರಡು ಕಟ್ಟೆಗಳನ್ನು ಕಟ್ಟಲಾಗಿದೆ. ಕೆರೆಗೆ ಕಾಯಕಲ್ಪ ನೀಡಿದ ನಂತರ ಗ್ರಾಮದ ಸೌಂದರ್ಯ ಹೆಚ್ಚಿದೆ’ ಎಂದು ಪಿಡಿಒ ಶಿವಾನಂದ ಹೇಳಿದರು.

ಜಾನುವಾರುಗಳಿಗೆ ನೀರು ಕುಡಿಯಲು ಗ್ರಾಮದಲ್ಲಿ ನೀರಿನ ತೊಟ್ಟಿ ಮಾಡಲಾಗಿದೆ. ಕೊಳವೆಬಾವಿಗಳ ಸುತ್ತ ಇಂಗುಗುಂಡಿ ನಿರ್ಮಿಸಲಾಗಿದೆ. ಕೆರೆಯಲ್ಲಿ ನೀರು ನಿಂತ ನಂತರ ಗಿಡಮರಗಳು ಹಸಿರಿನಿಂದ ನಳನಳಿಸುತ್ತಿವೆ. ಗ್ರಾಮದ ಪರಿಸರದಲ್ಲಿ ಹೊಸ ಗಿಡಗಳನ್ನು ನೆಡಲಾಗಿದೆ. ವಿಶ್ವ ಜಲ ದಿನಾಚರಣೆ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೆರೆ ಅವರೊಂದಿಗೆ ವಿಡಿಯೊ ಸಂವಾದ ನಡೆಸಿ ಜಲ ಸಂರಕ್ಷಣೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘400 ಮನೆಗಳು ಇರುವ ಧೂಪತಮಹಾಗಾಂವ 3,500 ಜನಸಂಖ್ಯೆ ಹೊಂದಿದೆ. ಗೊಗ್ಗವ್ವೆ ಕೆರೆಯ
ಯಶೋಗಾಥೆಯನ್ನು ನೋಡಲು ಅಕ್ಕಪಕ್ಕದ ಊರಿನವರು ಕುತೂಹಲದಿಂದ ನಮ್ಮೂರಿಗೆ ಬರುತ್ತಿದ್ದಾರೆ. ಅರಣ್ಯ ಇಲಾಖೆಯ ನೆರವು ಪಡೆದು 2 ಸಾವಿರ ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೆರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT