ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬೇಸಿಗೆಯ ಪಿಯು ಪರೀಕ್ಷೆ ಚಿಂತೆಗೆ ಮೊದಲೇ ದೊರಕಿತು ಪರಿಹಾರ

Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿನ ರಣ ಬಿಸಿಲು ಆಗಲೇ ವಿದ್ಯಾರ್ಥಿಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಹವಾಮಾನ ಇಲಾಖೆ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ ವರೆಗೂ ಏರುವ ಮುನ್ಸೂಚನೆ ನೀಡಿದೆ. ಬಿಸಿಲಿನ ಧಗೆಯಲ್ಲಿ ಓದಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳು ಇನ್ನು ಸುಡು ಬಿಸಿಲಲ್ಲಿ ಪಿಯುಸಿ ಪರೀಕ್ಷೆ ಬರೆಯುವುದು ಹೇಗೆ ಎನ್ನುವ ಆತಂಕದಿಂದಲೇ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಂಡರು.

ಪರೀಕ್ಷಾ ಕೊಠಡಿಯಲ್ಲಿ ನೀರು, ಫ್ಯಾನ್‌ ವ್ಯವಸ್ಥೆ, ಪರೀಕ್ಷಾ ವೇಳಾ ಪಟ್ಟಿಯಲ್ಲಿ ಆಗ ಬಹುದಾದ ಬದಲಾವಣೆ, ಶುಲ್ಕ ಪಾವತಿಗೆ ಖಾಸಗಿ ಕಾಲೇಜು ಆಡಳಿತ ಮಂಡಳಿ ಕಿರಿಕಿರಿ ಇತ್ಯಾದಿ ಪ್ರಶ್ನೆಗಳು ತೂರಿ ಬಂದವು. ಕೆಲ ಪಾಲಕರು ತಮ್ಮ ಅಂಗವಿಕಲ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಾಯಕರನ್ನು ಒದಗಿಸುವಂತೆಯೂ ಬಗ್ಗೆಯೂ ಪ್ರಶ್ನೆ ಕೇಳಿ ಸಮಾಧಾನದ ಉಸಿರು ಬಿಟ್ಟರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆಂಜನೇಯ ಅವರು ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಕ್ಲಿಷ್ಟಕರ್‌ ಪ್ರಶ್ನೆಗಳನ್ನು ಸಂಯಮದಿಂದ ಆಲಿಸಿ ಉತ್ತರ ನೀಡಿದರು. ಕೆಲವು ವಿಷಯಗಳು ಇಲಾಖೆಯ ವ್ಯಾಪ್ತಿಯೊಳಗೆ ಇರದ ಕಾರಣ ಜಿಲ್ಲಾಡಳಿತದ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.


* ದೈಹಿಕ ಅಂಗವಿಕಲರಿಗೆ ಪಿಯು ಪರೀಕ್ಷೆ ಬರೆಯಲು ಏನು ವ್ಯವಸ್ಥೆ ಮಾಡಲಾಗಿದೆ.

ವಿಜಯಲಕ್ಷ್ಮಿ ಹೊಸಾಳೆ, ಭಾಲ್ಕಿ

ಉ: ಸ್ಟುಡೆಂಟ್‌ ಅಚಿವ್‌ಮೆಂಟ್‌ ಟ್ರ್ಯಾಂಕಿಂಗ್ ಸಿಸ್ಟಂನಲ್ಲಿ ಕಾಲೇಜು ಪ್ರಾಚಾರ್ಯರು ಅಂಗವಿಕಲರ ಹೆಸರು ದಾಖಲು ಮಾಡಬೇಕು. ಕೆಲ ಪ್ರಾಚಾರ್ಯರು ಈ ಕೆಲಸ ಮಾಡಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿದ್ಯಾರ್ಥಿಯ ಅಂಗವೈಕಲ್ಯ ಪರಿಶೀಲಿಸಿ ಒಬ್ಬ ಸಹಾಯಕನನ್ನು ಕೊಟ್ಟು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಅದಕ್ಕೂ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಿಂದ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆದು ಪ್ರಾಚಾರ್ಯರ ಮೂಲಕ ಮನವಿಪತ್ರ ಸಲ್ಲಿಸಬೇಕು.

* ಸರ್ಕಾರಿ ಪಿಯು ಕಾಲೇಜುಗಳಿಗೆ ಮೂಲಸೌಕರ್ಯ ಏಕೆ ಒದಗಿಸುತ್ತಿಲ್ಲ. ಸರ್ಕಾರಕ್ಕೆ ಅಷ್ಟು ಬಡತನ ಬಂದಿದೆಯೇ?

ವೈಷ್ಣವಿ, ವಿದ್ಯಾರ್ಥಿನಿ

ಉತ್ತರ: ‘ಪ್ರಜಾವಾಣಿ’ಯಲ್ಲಿ ಸರಣಿ ರೂಪದಲ್ಲಿ ವರದಿಗಳು ಪ್ರಕಟವಾದ ನಂತರ ರಾಜ್ಯ ಸರ್ಕಾರ ಬೀದರ್ ಜಿಲ್ಲೆಗೆ ಪ್ರಸಕ್ತ ವರ್ಷ ₹ 30 ಲಕ್ಷ ಬಿಡುಗಡೆ ಮಾಡಿದೆ. 2022–2023ನೇ ಸಾಲಿಗೆ ₹ 1 ಕೋಟಿ ಅನುದಾನ ಬಿಡುಗಡೆ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಈ ಅನುದಾನದಲ್ಲಿ ಮೂಲಸೌಕರ್ಯ ಒದಗಿಸಲಾಗುವುದು.

* ಪಾಲಕರ ಹಾಗೂ ಉಪನ್ಯಾಸಕರ ಸಂಘ ರಚಿಸಿ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಲು ಸಾಧ್ಯವಿದೆಯೇ?

ಟಿ.ಎಂ.ಮಚ್ಚೆ, ಬೀದರ್, ನವಿಲಕುಮಾರ ಸಂತಪುರ

ಉ: ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲು ಅವಕಾಶ ಇದೆ. ಆದರೆ, ಬೀದರ್ ಜಿಲ್ಲೆಯ ಒಂದು ಕಾಲೇಜಿನಲ್ಲೂ ಇಂತಹ ಸಮಿತಿ ರಚನೆಯಾಗಿಲ್ಲ. ಈ ಸಮಿತಿಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಸಮಿತಿ ರಚಿಸಿದರೆ ಕಾಲೇಜು ಅಭಿವೃದ್ಧಿಗೆ ಅನುಕೂಲವಾಗಲಿದೆ.

* ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಾವತಿಗೆ ಕಾಲೇಜಿನವರು ಕಿರಿಕಿರಿ ಮಾಡುತ್ತಿದ್ದಾರೆ.

ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಭಾಲ್ಕಿ

ಉ: ಜಿಲ್ಲಾಡಳಿತ ಮೆರಿಟ್‌ ಆಧಾರದ ಮೇಲೆ ಅನೇಕ ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿದೆ. ಹೀಗೆ ಪ್ರವೇಶ ಪಡೆದವರಿಗೆ ಸಮಸ್ಯೆಯಾಗಿದ್ದರೆ ದೂರುಕೊಡಬಹುದು. ಕಾಲೇಜುಗಳು ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಕಿರಿಕಿರಿ ಮಾಡಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ.

* ಬೇಸಿಗೆ ಇರುವ ಕಾರಣ ಪರೀಕ್ಷಾ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆಯೇ?

ನಾಗರಾಜ, ಚಿಟಗುಪ್ಪ

ಉ: ಪರೀಕ್ಷಾ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಆದರೂ ವಿದ್ಯಾರ್ಥಿಗಳು ಮನೆಯಿಂದ ಬರುವಾಗ ಒಂದು ಬಾಟಲಿ ನೀರು ತರುವುದು ಉತ್ತಮ.

* ಒಂದೇ ಬಾರಿಗೆ ಜೆಇಇ, ಪಿಯುಸಿ ಪರೀಕ್ಷೆಗಳು ಇರುವುದರಿಂದ ಎರಡೂ ಪರೀಕ್ಷೆ ಬರೆಯುವುದು ಹೇಗೆ?

ಕೃಷ್ಣವೇಣಿ, ದತ್ತಗಿರಿ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿ

ಉ: ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

* ಚಿಕಲಿ(ಯು)ದಿಂದ ಹೊಕ್ರಾಣ ಪರೀಕ್ಷಾ ಕೇಂದ್ರಕ್ಕೆ ಬಸ್ ಸೌಲಭ್ಯ ಇಲ್ಲ. ಸಾರಿಗೆ ವ್ಯವಸ್ಥೆ ಮಾಡಿರಿ.

ಗುಲಾಂ ದಸ್ತಗಿರಿ, ಬಾಲಾಜಿ ಕುಂಬಾರ, ಔರಾದ್, ಸಿದ್ಧಾರೂಢ ಭಾಲ್ಕೆ, ಬೀದರ್

ಉ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಇರುವ ಮಾರ್ಗದಲ್ಲಿ ಹೆಚ್ಚುವರಿ ಬಸ್‌ ಓಡಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಒಂದೆರಡು ವಿದ್ಯಾರ್ಥಿಗಳು ಇದ್ದರೆ ಪರೀಕ್ಷಾ ಕೇಂದ್ರಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡುವಂತೆ ಪಂಚಾಯಿತಿಗೆ ಮನವಿ ಮಾಡಲಾಗುವುದು.

* ಅಂಗವಿಕಲರಿಗೆ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥ ಕಲ್ಪಿಸಲಾಗಿದೆಯೇ?

ಶಿವಾಜಿ, ಕಮಲನಗರದ ಶಾಂತಿವರ್ಧಕ ಕಾಲೇಜು

ಉ: ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಇಲಾಖೆ ಮಾರ್ಗದರ್ಶಿ ಪುಸ್ತಿಕೆಯಲ್ಲೂ ಇದರ ಉಲ್ಲೇಖವಿದೆ. ಅಂಧರಾಗಿದ್ದರೆ ಒಂದು ಪೇಪರ್‌ಗೆ ಒಂದು ತಾಸು ಪ್ರತ್ಯೇಕವಾಗಿ ಅವಕಾಶ ಕೊಡಲಾಗುವುದು.

* ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆಯೇ?

ಬಾಲಾಜಿ ಕುಂಬಾರ, ಔರಾದ್.

ಉ: ಪರೀಕ್ಷಾ ಕೊಠಡಿಗಳಿಗೆ ಮಾಸ್ಕ್‌ ಧರಿಸಿಕೊಂಡು ಬರಬೇಕು. ಆದರೆ, ಹಿಜಾಬ್‌ ಧರಿಸಿ ಬರುವಂತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರರೀಕ್ಷಾ ಕೊಠಡಿಯಲ್ಲಿ ಬರೆಯಲು ಅವಕಾಶ ಕೊಟ್ಟರೆ ಕೊಠಡಿ ಮೇಲ್ವಿಚಾರಕರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗುವುದು.

* ಫ್ಯಾನ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಿ.

ಚೇತನ್‌ ಸೋರಳ್ಳಿ, ಅಣದೂರು

ಉ: ಈಗಾಗಲೇ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗಿದೆ. ಬಿಸಿಲು ಜಾಸ್ತಿ ಇರುವ ಕಾರಣ ಪರೀಕ್ಷಾ ಕೊಠಡಿಗಳಲ್ಲಿ ಫ್ಯಾನಿನ ವ್ಯವಸ್ಥೆ ಮಾಡಲಾಗುವುದು.

* ಖಾಸಗಿ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಕೊನೆಯ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಕೊಡಲು ಸತಾಯಿಸುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಿ.

ಮಲ್ಲಿಕಾರ್ಜುನ, ಹುಮನಾಬಾದ್

ಉ: ಕಾಲೇಜು ಅಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುತ್ತಿದ್ದರೆ ತಕ್ಷಣ ಇಲಾಖೆಗೆ ಲಿಖಿತ ದೂರು ಕೊಡಬೇಕು. ಇಲಾಖೆ ದೂರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ.

* ಜಿಲ್ಲೆಗೆ ಉತ್ತಮ ಫಲಿತಾಂಶ ಪಡೆಯಲು ಏನು ಸಿದ್ಧತೆ ಮಾಡಿಕೊಳ್ಳಲಾಗಿದೆ

ಮಹೇಶ ಗೋರನಾಳಕರ್, ಗುರುನಾಥ ರಾಜಗೀರಾ, ಬೀದರ್

ಉ: 10 ಸ್ಥಾನದ ಒಳಗೆ ಬರುವಂತೆ ಮಾಡಲು ಎಲ್ಲ ಯೋಜನೆ ರೂಪಿಸಿ ನಿತ್ಯ ಒಂದು ಗಂಟೆ ವಿಶೇಷ ತರಗತಿ ನಡೆಸಲಾಗಿದೆ.

ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ ಮಾಡಲಾಗಿದೆ. ನಾಲ್ಕು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲಾಗಿದೆ.

* ಈ ಬಾರಿಯ ಪ್ರಶ್ನೆ ಪತ್ರಿಕೆ ಸುಲಭವಾಗಿರಲಿದೆಯೇ?

ನಿವೇದಿತಾ, ಬಿ.ವಿ.ಭೂಮರೆಡ್ಡಿ ಕಾಲೇಜು ಬೀದರ್, ಸೋನಿ ನೌಬಾದ್.

ಉ: ಚೆನ್ನಾಗಿ ಓದಿದವರಿಗೆ ಪರೀಕ್ಷೆಯಲ್ಲಿ ಬರೆಯಲು ಉತ್ತರ ಸುಲಭವಾಗಿರುತ್ತದೆ. ಈಗಲೂ ಸಮಯ ಮೀರಿಲ್ಲ.

ಒಂದು ತಿಂಗಳು ಮಟ್ಟಿಗೆ ಮೊಬೈಲ್‌ ತೊರೆಯಬೇಕು. ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆಗೆಟ್ಟು ಓದದೇ, ಇಷ್ಟಪಟ್ಟು ಓದಬೇಕು. ಆಗ ಪರೀಕ್ಷೆ ಬರೆಯಲು ಕಷ್ಟವಾಗಲಾರದು.

* ಪಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಅಧಿಕ ಇವೆ. ಸಮಯ ಸಾಲುತ್ತಿಲ್ಲ ಏನು ಮಾಡಬೇಕು?

ಮೇಘಾ, ಭಾಲ್ಕಿ

ಉ: ಪ್ರಶ್ನೆ ಪತ್ರಿಕೆಯನ್ನು ಇಟ್ಟುಕೊಂಡು ಸಮಯದ ವ್ಯವಸ್ಥಾಪನೆ ಮಾಡಬೇಕು. ಇಷ್ಟು ಸಮಯದಲ್ಲಿ ಇಷ್ಟು ಉತ್ತರ ಬರೆಯುಬೇಕು ಎನ್ನುವುದನ್ನು ರೂಢಿಸಿಕೊಳ್ಳಬೇಕು. ಕೇಳಿದ್ದನ್ನು ಮಾತ್ರ ಬರೆಯಬೇಕು. ಅನಗತ್ಯವಾಗಿ ಬರೆದು ಸಮಯ ವ್ಯರ್ಥ ಮಾಡಿಕೊಳ್ಳಬಾರದು. ಆಗ ನಿಗದಿತ ಸಮಯದಲ್ಲೇ ಪ್ರಶ್ನೆ ಪತ್ರಿಕೆ ಬಿಡಿಸಲು ಸಾಧ್ಯವಾಗಲಿದೆ.

* ಪಿಯುಸಿ ಪರೀಕ್ಷೆಗಳು ಮುಂದೆ ಹೋಗಲಿದೆಯೇ?

ಜಯವಂತ ಹಿರೇನಾಗಾಂವಕರ್

ಉ: ಈಗಾಗಲೇ ಪರೀಕ್ಷೆ ದಿನಾಂಕ ನಿರ್ಧಾರವಾಗಿದೆ. ನನಗೆ ತಿಳಿದ ಮಟ್ಟಿಗೆ ಮತ್ತೆ ಪರೀಕ್ಷೆ ಮುಂದೆ ಹೋಗದು. ಪರೀಕ್ಷೆ ದಿನಾಂಕ ಬದಲಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ.

* ಬೀದರ್ ಓಲ್ಡ್‌ಸಿಟಿಯ ಬಾಲಕರ ಕಾಲೇಜಿನಲ್ಲೇ ನಾಯಿಗಳ ಹಿಂಡು ವಾಸ್ತವ್ಯ ಮಾಡುತ್ತಿವೆ. ಅವುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?

ಬಸವರಾಜ, ಲೋಕೇಶ ವಿದ್ಯಾರ್ಥಿ

ಉ: ಕಾಲೇಜಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಈಗಾಗಲೇ ಕಾಲೇಜು ಪ್ರಾಚಾರ್ಯರ ಮೂಲಕ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಮತ್ತೊಮ್ಮೆ ನಗರಸಭೆ ಆಯಕ್ತರಿಗೆ ಪತ್ರ ಬರೆದು ಕಾಲೇಜು ಆವರಣದಲ್ಲಿ ಶ್ವಾನ ಬರದಂತೆ ಕ್ರಮ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT