ಬೀದರ್‌ನಿಂದ ಲೋಕಸಭಾ ಚುನಾವಣೆ ಕಹಳೆ

7
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ

ಬೀದರ್‌ನಿಂದ ಲೋಕಸಭಾ ಚುನಾವಣೆ ಕಹಳೆ

Published:
Updated:
Deccan Herald

ಬೀದರ್: ‘ಕೋಮುವಾದಿಗಳಿಂದ ದೇಶ ಉಳಿಸುವ ಕೆಲಸ ಕಾಂಗ್ರೆಸ್‌ ಮಾಡಲಿದ್ದು, ಜನಧ್ವನಿ ಸಮಾವೇಶದ ಮೂಲಕ ಜನ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲಿದೆ. ಬೀದರ್‌ನಿಂದ ಚುನಾವಣೆಯ ರಣಕಹಳೆ ಊದಲಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಶಿವಾ ಇಂಟರ್‌ನ್ಯಾಷನಲ್‌ನಲ್ಲಿ ಶುಕ್ರವಾರ ಜನಧ್ವನಿ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಆರು, ಎಂಟು ತಿಂಗಳಲ್ಲಿ ದೇಶದ ಭವಿಷ್ಯವನ್ನು ತೀರ್ಮಾನಿಸುವ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಆಗಲೇ ಸಿದ್ಧತೆ ಆರಂಭಿಸಿದೆ’ ಎಂದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಹಾಗೂ ಭದ್ರತೆ ಕುರಿತು ಮಾತನಾಡುತ್ತಿಲ್ಲ. ನಾಲ್ಕೂವರೆ ವರ್ಷಗಳಲ್ಲಿ ಒಂದು ಬಾರಿಯೂ ಮಾಧ್ಯಮಗೋಷ್ಠಿ ನಡೆಸಿಲ್ಲ. ದೇಶದ ಜನ ಕೇವಲ ಮನ್‌ ಕಿ ಬಾತ್‌ ಮಾತ್ರ ಕೇಳುವಂತಾಗಿದೆ. ಸರ್ವಾಧಿಕಾರಿ ಧೋರಣೆ ಮುಂದುವರಿದಿದೆ’ ಎಂದು ಆರೋಪಿಸಿದರು.

‘ಮೋದಿ ಅವರು ಲೋಕಸಭೆ ಚುನಾವಣೆಯ ಪೂರ್ವದಲ್ಲಿ ವಿದೇಶದ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣ ವಾಪಸ್‌ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಜಮಾ ಮಾಡುವ ಆಸೆ ತೋರಿಸಿದ್ದರು. ಆದರೆ ನುಡಿದಂತೆ ನಡೆಯಲಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಪೆಟ್ರೋಲ್‌, ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದರೂ ಮೋದಿ ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಕುರಿತು ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕರಾದ ರಹೀಂಖಾನ್, ಬಿ. ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಶರಣಪ್ರಕಾಶ ಪಾಟೀಲ, ಚಂದ್ರಾಸಿಂಗ್ ಇದ್ದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡ ಶಾಂತಲಿಂಗ ಸಾವಳಗಿ, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಡಿ.ಕೆ.ಸಂಜುಕುಮಾರ್, ರಫತ್‌ಮತಿನ್, ಮೀನಾಕ್ಷಿ ಸಂಗ್ರಾಮ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !