ಭಾನುವಾರ, ಮೇ 9, 2021
18 °C

ಸ್ವಾಭಿಮಾನಿಗಳಿಗೆ ಪ್ರತಿಷ್ಠೆಯ ಚುನಾವಣೆ: ಮತದಾರರಿಗೆ ಮಲ್ಲಿಕಾರ್ಜುನ ಖೂಬಾ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬಿಜೆಪಿ ಸ್ಥಳೀಯರಾದ 16 ಆಕಾಂಕ್ಷಿಗಳನ್ನು ಕಡೆಗಣಿಸಿ ಹೊರಗಿನವರಿಗೆ ಟಿಕೆಟ್ ನೀಡಿದ್ದರಿಂದ ಇದು ಸ್ವಾಭಿಮಾನಿಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಪಕ್ಷೇತರನಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಕೇಳಿಕೊಂಡರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರದ ಮುಕ್ತಾಯದ ದಿನ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಅವರು ತಮ್ಮ ಅಭ್ಯರ್ಥಿಯ ಗೆಲುವಿಗೆ ಹರಸಾಹಸ ನಡೆಸಿದ್ದಾರೆ. ಹಣ ಹಂಚುತ್ತಿರುವ ಬಗ್ಗೆ ಆರೋಪಗಳಿವೆ. ಆದ್ದರಿಂದ ಯಾವುದಕ್ಕೂ ಧೃತಿಗೆಡದೆ ಧೈರ್ಯದಿಂದ ಮತದಾನ ಮಾಡಬೇಕು. ಇಲ್ಲಿನ ಜನರ ಶಕ್ತಿ ಏನೆಂಬುದನ್ನು ತೋರಿಸಿ ಕೊಡಬೇಕು. ನಾನು ಎರಡು ಸಲ ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ವಿಕಾಸ ಕೈಗೊಂಡಿದ್ದೇನೆ. ಕಳೆದ ಸಲ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದೆ. ಆದರೆ, ಈ ಸಲ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು ಹೇಳಿದರು.

ಡಾ.ಪೃಥ್ವಿರಾಜ್ ಬಿರಾದಾರ ಮಾತನಾಡಿ, ‘ಬಸವಣ್ಣನವರ ನಾಡಿನ ವಿಕಾಸಕ್ಕಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಮಲ್ಲಿಕಾರ್ಜುನ ಖೂಬಾ ಅವರಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.

ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿದರು.

ಮುಖಂಡರಾದ ಕಾಳಿದಾಸ ಜಾಧವ, ಬಸವೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ವೀರಣ್ಣ ಹಲಶೆಟ್ಟೆ, ಬಸವರಾಜ ಬಾಲಿಕಿಲೆ, ರಾಜಕುಮಾರ ಹೊಳಕುಂದೆ, ಜಗನ್ನಾಥ ಖೂಬಾ, ಸತೀಶ ಮೆಟಗೆ, ಉಮೇಶ ಶೀಲವಂತ, ತುಕಾರಾಮ ಕಾಳೇಕರ್, ಶರಖು ಗುದಗೆ, ಚೆನ್ನಪ್ಪ ರಾಜಾಪುರೆ, ರವೀಂದ್ರ ಗುಂಗೆ, ಪ್ರಕಾಶ ತೂಗಾವೆ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು