ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆ ಹೆಚ್ಚಿಸಿಕೊಂಡ ‘ಭಗವಂತ’

ಯಾವ ಸುತ್ತಿನಲ್ಲೂ ಮುನ್ನಡೆ ಸಾಧಿಸದ ಕಾಂಗ್ರೆಸ್‌ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
Last Updated 23 ಮೇ 2019, 19:57 IST
ಅಕ್ಷರ ಗಾತ್ರ

ಬೀದರ್: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್ ಅವರನ್ನು ಪರಾಭವಗೊಳಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಈ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸೋಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 4,59,290 ಮತಗಳನ್ನು ಪಡೆದು 92,222 ಮತಗಳ ಅಂತರದಿಂದ ಧರ್ಮಸಿಂಗ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು 5,85,471 ಮತಗಳನ್ನು ಪಡೆದು 1,16,834 ಮತಗಳ ಅಂತರದಿಂದ ಈಶ್ವರ ಖಂಡ್ರೆ ಅವರನ್ನು ಮಣಿಸಿ ನರೇಂದ್ರ ಮೋದಿ ಅಲೆಯಲ್ಲಿ ಎರಡನೆಯ ಬಾರಿಗೆ ಸಂಸತ್ತಿಗೆ ಪ್ರವೇಶ ಮಾಡಿದ್ದಾರೆ.

ನಗರದ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತ ಎಣಿಕೆ ಕೇಂದ್ರದಲ್ಲಿ ನಡೆದ ಮೊದಲ ಸುತ್ತಿನ ಮತ ಎಣಿಕೆಯಲ್ಲೇ ಭಗವಂತ ಖೂಬಾ ಅವರು 34,311 ಮತಗಳನ್ನು ಪಡೆದು 11,655 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಹಾಕಿದರು. ಮುನ್ನಡೆಯು ಎರಡನೆಯ ಸುತ್ತಿನಲ್ಲಿ 29,200 ಹಾಗೂ ಮೂರನೇ ಸುತ್ತಿನಲ್ಲಿ 33,633ಕ್ಕೆ ಏರಿತು.

ನಾಲ್ಕನೆಯ ಸುತ್ತಿನಲ್ಲಿ ಮುನ್ನಡೆ 43,740ಕ್ಕೆ ತಲುಪಿದಾಗ ಕಾಂಗ್ರೆಸ್‌ನ ಏಜೆಂಟರು ನಿಧಾನವಾಗಿ ಮತ ಎಣಿಕೆ ಕೇಂದ್ರದಿಂದ ಹೊರಗೆ ನಡೆದರು. 10ನೇ ಸುತ್ತಿನ ಮತ ಎಣಿಕೆ ನಡೆದಾಗ ಕಾಂಗ್ರೆಸ್‌ನ ಏಜೆಂಟರೇ ಇರಲಿಲ್ಲ.

11ನೇ ಸುತ್ತಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಮತಗಳ ಅಂತರ 55,746ಕ್ಕೆ ಮುಟ್ಟಿತ್ತು. ಅಷ್ಟರಲ್ಲಿ ಬಿಜೆಪಿ ಮುಖಂಡರೆಲ್ಲ ಮತ ಎಣಿಕೆ ಕೇಂದ್ರದಲ್ಲಿ ಜಮಾಯಿಸಿದರು. ಮತ ಎಣಿಕೆ ಕೇಂದ್ರದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದರು. ಭಗವಂತ ಖೂಬಾ ಅವರು ಒಂದು ಸುತ್ತಿನಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗೆ ಮುನ್ನಡೆ ಸಾಧಿಸುವ ಅವಕಾಶ ನೀಡಲಿಲ್ಲ. ಹೀಗಾಗಿ ಈಶ್ವರ ಖಂಡ್ರೆ ಅವರು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ.

ಈ ಬಾರಿ ಲೋಕಸಭೆಗೆ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿಯೇ ಇರಲಿಲ್ಲ. ಜಿಲ್ಲೆಯಲ್ಲಿ ಲಿಂಗಾಯತ ಮತಗಳು ಅಧಿಕ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್‌ ಹೈಕಮಾಂಡ್‌ ಜಿಲ್ಲೆಯ ಪ್ರಭಾವಿ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಬಳಸಿದ ರಣತಂತ್ರ ಸಂಪೂರ್ಣ ವಿಫಲವಾಯಿತು.

ಬಿಜೆಪಿಯ ಅಭ್ಯರ್ಥಿ ಮೂರು ತಿಂಗಳಿಂದ ಪ್ರಚಾರ ಕಾರ್ಯ ನಡೆಸಿದ್ದರು. ಪ್ರತಿಯೊಂದು ಗ್ರಾಮದಲ್ಲೂ ಅಚ್ಚುಕಟ್ಟಾಗಿ ಪ್ರಚಾರ ಮಾಡಿದ್ದರು. ಸಾಮಾಜಿಕ ಜಾಲತಾಣಗಳನ್ನೂ ಸಹ ಸಮರ್ಥವಾಗಿ ಬಳಸಿಕೊಂಡಿದ್ದರು. ಕಾಂಗ್ರೆಸ್‌ನ ಈಶ್ವರ ಖಂಡ್ರೆ ಪ್ರಚಾರದಲ್ಲಿ ಹಿಂದೆ ಬಿದ್ದಿರುವುದು ಕಂಡು ಬಂದಿತು. ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಭಗವಂತ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಲಿಲ್ಲ.

ಜಿಲ್ಲೆಯಿಂದ ಆರಂಭಿಸಿದ ಹೊಸ ರೈಲುಗಳ ಸಂಚಾರ, ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ಹಾಗೂ ಅಭ್ಯರ್ಥಿಯ ಸರಳ ಸ್ವಭಾವ ಮತದಾರರ ಮೇಲೆ ಪ್ರಭಾವ ಬೀರಿ ಬಿಜೆಪಿ ನಿರೀಕ್ಷೆಗೂ ಅಧಿಕ ಮತಗಳನ್ನು ಪಡೆಯಲು ಸಾಧ್ಯವಾಯಿತು.

‘ನರೇಂದ್ರ ಮೋದಿ ಅವರ ಅಲೆ, ಬಿ.ಎಸ್‌.ಯಡಿಯೂರಪ್ಪ, ಪದಾಧಿಕಾರಿಗಳ ಪರಿಶ್ರಮ ಹಾಗೂ ಖೂಬಾ ಅವರ ಅಭಿವೃದ್ಧಿ ಕಾರ್ಯಗಳು ಮತ್ತೆ ಬಿಜೆಪಿ ಗೆಲುವು ಸಾಧಿಸುವಂತೆ ಮಾಡಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT