ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ವಿದ್ಯುತ್‌ ಕಣ್ಣಾಮುಚ್ಚಾಲೆ, ಗ್ರಾಹಕರಿಗೆ ಕಿರಿಕಿರಿ

ಜಿಲ್ಲೆಯ ಜೆಸ್ಕಾಂ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ
Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಮಳೆಗಾಲದಲ್ಲಿ ಮಳೆ, ಗಾಳಿಗೆ ವಿದ್ಯುತ್‌ ಕೈಕೊಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಚಳಿಗಾಲದಲ್ಲೂ ವಿದ್ಯುತ್‌ ಕಣ್ಣಾಮುಚ್ಚಾಲೆ ನಡೆಸಿರುವುದು ಗ್ರಾಹಕರಿಗೆ ತಲೆ ನೋವಾಗಿದೆ. ಗುಣಮಟ್ಟದ ವಿದ್ಯುತ್‌ ಪೂರೈಕೆ ಆಗದಿರುವುದು ಹಾಗೂ ಆಗಾಗ ಕಡಿತಗೊಳ್ಳುವುದು ಗ್ರಾಹಕರಿಗೆ ಕಿರಿಕಿರಿಯಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಬಾಗಿಲು ಮುಚ್ಚಿರುವ ಅನೇಕ ಖಾಸಗಿ ಸಂಸ್ಥೆಗಳ ಕಚೇರಿಗಳು ತೆರೆದುಕೊಂಡಿಲ್ಲ. ಅನೇಕ ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕಚೇರಿಗಳಲ್ಲಿ ಇನ್ವರ್ಟರಗಳು ಇರುತ್ತಿದ್ದವು. ಮನೆಗಳಲ್ಲಿ ಇನ್ವರ್ಟರಗಳು ಕಡಿಮೆ. ಆಗಾಗ ವಿದ್ಯುತ್‌ ಕೈಕೊಡುವುದರಿಂದ ಕಚೇರಿ ಕೆಲಸಗಳು, ವಾಣಿಜ್ಯ ಸಂಸ್ಥೆ ಹಾಗೂ ಕೈಗಾರಿಕೆಗಳಿಗೂ ಸಮಸ್ಯೆಯಾಗುತ್ತಿದೆ.

ಬೀದರ್‌ ವಿಭಾಗದಲ್ಲಿ 202 ಹಾಗೂ ಹುಮನಾಬಾದ್ ವಿಭಾಗದಲ್ಲಿ 128 ಫೀಡರ್‌ಗಳು ಇವೆ. ಬೀದರ್ ಉಪ-ವಿಭಾಗದ ವ್ಯಾಪ್ತಿಗೆ ಬೀದರ್ ನಗರ, ಬೀದರ್‌ ಗ್ರಾಮೀಣ, ಔರಾದ್ ಹಾಗೂ ಭಾಲ್ಕಿ ಗ್ರಾಮೀಣ ಪ್ರದೇಶವನ್ನು ಸೇರಿಸಲಾಗಿದೆ. ಈ ವಿಭಾಗದಲ್ಲಿ 21.80 ಕೋಟಿ ಕನೆಕ್ಷನ್‌ಗಳಿವೆ. ಬೀದರ್‌ ಉಪ ವಿಭಾಗದಲ್ಲಿ ಸುಮಾರು 2,93,350 ಹಾಗೂ ಹುಮನಾಬಾದ್‌ ಉಪ ವಿಭಾಗದಲ್ಲಿ 1,56,697 ನೋಂದಾಯಿತ ಗಾಹಕರಿದ್ದಾರೆ.

ಜಿಲ್ಲೆಗೆ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಇನ್ನೂ ಕೆಲ ಜ್ಯೂನಿಯರ್‌ ಎಂಜಿನಿಯರ್‌ಗಳ ಅಗತ್ಯವಿದೆ. ನಗರದಲ್ಲಿ ಜನ ಸಾಂದ್ರತೆ ಅಧಿಕ ಇದೆ. ಜನಸಂಖ್ಯೆ ಹೆಚ್ಚುತ್ತಿದ್ದು, ನಗರ ವಿಸ್ತಾರಗೊಳ್ಳುತ್ತಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಮೇಲೆ ಕೆಲಸದ ಭಾರ ಹೆಚ್ಚಿದೆ. ಗ್ರಾಹಕರಿಗೆ ಉತ್ತಮ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಗರಕ್ಕೆ ಪ್ರತ್ಯೇಕ ಉಪ-ವಿಭಾಗ ತೆರೆಯಬೇಕು ಎನ್ನುವುದು ಜನರ ಬಹುದಿನಗಳ ಬೇಡಿಕೆಯಾಗಿದೆ.

‘ಬೀದರ್‌ ನಗರವೊಂದರಲ್ಲೇ 84 ಸಾವಿರ ನೋಂದಾಯಿತ ಗ್ರಾಹಕರು ಇದ್ದಾರೆ. ಪ್ರತ್ಯೇಕ ವಿಭಾಗ ರಚನೆಯಿಂದ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಗ್ರಾಹಕರಿಗೆ ಉತ್ತಮ ಸೇವೆ ಕೊಡಲು ಅನುಕೂಲವಾಗಲಿದೆ’ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಹೇಳುತ್ತಾರೆ.

‘ನಗರದಲ್ಲಿ ಮುನ್ಸೂಚನೆ ನೀಡದೆ ವಿದ್ಯುತ್ ಪೂರೈಕೆ ಸ್ಥಗಿತಗಳಿಸಲಾಗುತ್ತಿದೆ. ಕನಿಷ್ಠ ಒಂದು ದಿನ ಮುಂಚಿತವಾಗಿ ತಿಳಿಸಿದರೆ ಹೋಟೆಲ್ ಮಾಲೀಕರು, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್‌ ಉಪಕರಣಗಳ ದುರಸ್ತಿ ಅಂಗಡಿಯವರು ಬೇರೆ ಕೆಲಸಗಳನ್ನಾದರೂ ಮಾಡಿಕೊಳ್ಳಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಬೀದರ್‌ ಖಾನಾವಳಿ ಮಾಲೀಕ ಶಂಕರ ಮರಕಲೆ.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಆಗಾಗ ವಿದ್ಯುತ್ ಕೈಕೊಡುತ್ತಿರುತ್ತದೆ. ಹಳ್ಳಿಗಳಲ್ಲಿ ಟಿ.ಸಿ. ಸುಟ್ಟರೆ ತಕ್ಷಣ ಗೊತ್ತಾಗುವುದಿಲ್ಲ. ಜೆಸ್ಕಾಂ ವ್ಯಾಪ್ತಿ ದೊಡ್ಡದಾಗಿದೆ. ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ರೈತರು ಮಾಹಿತಿ ನೀಡಿದರೆ ಮಾತ್ರ ಗೊತ್ತಾಗುತ್ತದೆ.

ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ ನಿರಂತರ ಜ್ಯೋತಿ ಇದ್ದರೂ ಪ್ರತಿದಿನ ಕನಿಷ್ಠ 2ರಿಂದ 3 ಗಂಟೆ ವಿದ್ಯುತ್‌ ಕಡಿತಗೊಳ್ಳುವುದರಿಂದ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ.

ಇನ್ನೂ ತಾಲ್ಲೂಕಿನ ಧನ್ನೂರ, ಹಾಲಹಳ್ಳಿ ಸೇರಿದಂತೆ ಇತರೆಡೆ ಗೃಹ ವಿದ್ಯುತ್‌ ಸರಬರಾಜು ಹೆಚ್ಚಿನ ಮಟ್ಟದಲ್ಲಿ ಕಡಿತಗೊಳ್ಳುವುದಿಲ್ಲ. ಆದರೆ ರೈತರಿಗೆ ನಿತ್ಯ ನಾಲ್ಕರಿಂದ ಐದು ಗಂಟೆ ಮಾತ್ರ ತ್ರಿಫೇಸ್‌ ವಿದ್ಯುತ್‌ ಸರಬರಾಜು ಆಗುತ್ತಿರುವುದರಿಂದ ರೈತರಿಗೆ ಕಡಲೆ, ಕಬ್ಬಿಗೆ ಪೂರ್ಣ ಪ್ರಮಾಣದಲ್ಲಿ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ ಎಂದು ಧನ್ನೂರದ ರೈತ ಮಹೇಶ ಹಾಳೆ ಹೇಳುತ್ತಾರೆ.

ಪೂರಕ ಮಾಹಿತಿ: ಗುಂಡು ಅತಿವಾಳ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ಗಿರಿರಾಜ ವಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT