ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರಿಗೆ ದೊರೆಯದ ಪ್ರಶಸ್ತಿಗಳು

ಗಡಿನಾಡು ಉತ್ಸವದಲ್ಲಿ ಟೆನಿಸ್ ಕೃಷ್ಣ ಕಳವಳ
Last Updated 23 ಫೆಬ್ರುವರಿ 2019, 13:33 IST
ಅಕ್ಷರ ಗಾತ್ರ

ಬೀದರ್: ‘ನಮ್ಮ ನಡುವೆ ಅನೇಕ ಪ್ರತಿಭೆಗಳಿದ್ದರೂ ಪ್ರಶಸ್ತಿಗಳು ಹಣ ಇದ್ದವರ ಪಾಲಾಗುತ್ತಿವೆ. ಪ್ರೋತ್ಸಾಹವಿಲ್ಲದ ಕಾರಣ ಅರ್ಹ ಪ್ರತಿಭೆಗಳು ಕಮರುತ್ತಿವೆ’ ಎಂದು ಹಾಸ್ಯ ಕಲಾವಿದ ಟೆನಿಸ್ ಕೃಷ್ಣ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಆರನೆಯ ಜಿಲ್ಲಾ ಗಡಿನಾಡು ಉತ್ಸವದಲ್ಲಿ ಅವರು ಮಾತನಾಡಿದರು.

‘650 ಕನ್ನಡ ಚಿತ್ರಗಳಲ್ಲಿ ಪಾತ್ರ ಮಾಡಿದ್ದೇನೆ. ಹಣ ಸಂಪಾದನೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದರೆ ಅನ್ಯ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದೆ. ಆದರೆ ಕನ್ನಡದ ಮೇಲಿನ ಅಭಿಮಾನಕ್ಕೆ ಕನ್ನಡ ಚಲನಚಿತ್ರ ರಂಗದಲ್ಲಿ ಉಳಿದುಕೊಂಡಿದ್ದೇನೆ’ ಎಂದರು.

‘ಗಡಿನಾಡು ಉತ್ಸವ ಸೇರಿದಂತೆ ಕನ್ನಡದ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ. ಮಹಿಳೆಯರು ಧಾರವಾಹಿಗಳಿಗೆ ಅಂಟಿಕೊಂಡರೆ, ಬಹುತೇಕ ಪುರುಷರು ಬಾರ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಐಟಂ ಸಾಂಗ್‌ ವೀಕ್ಷಣೆಗೆ ಬರುವ ಜನ ಕನ್ನಡದ ಕಾರ್ಯಕ್ರಮಗಳಿಗೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನನ್ನ ತಂದೆ ಶಾಮಣ್ಣ ಟೆನಿಸ್‌ ಕೋಚ್‌ ಆಗಿದ್ದರು. ಕೆಂಗಲ್‌ ಹನುಮಂತಯ್ಯ, ವೀರೇಂದ್ರ ಹೆಗ್ಗಡೆ ಅವರಿಗೆ ತರಬೇತಿ ನೀಡಿದ್ದರು. ನಾನು ಅನಂತನಾಗ ಹಾಗೂ ವಿಷ್ಣುವರ್ಧನ ಅವರಿಗೆ ತರಬೇತಿ ನೀಡಿದ್ದೆ. ಇದೇ ಕಾರಣಕ್ಕೆ ಚಿತ್ರರಂಗದವರು ನನ್ನನ್ನು ಟೆನಿಸ್‌ ಕೃಷ್ಣ ಎಂದು ಕರೆದರು. ಇಂದು ಜನ ನನ್ನನ್ನು ಅದೇ ಹೆಸರಲ್ಲಿ ಗುರುತಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರೇಕ್ಷಕರ ಒತ್ತಾಯದ ಮೇರೆಗೆ ಟೆನಿಸ್‌ ಕೃಷ್ಣ ಅವರು ‘ಯುಗ ಯುಗಗಳೇ ಸಾಗಲಿ, ನನ್ನ ಪ್ರೀತಿ ಶಾಶ್ವತ....’ ಹಾಡು ಹಾಡಿದರು. ನಂತರ ಹಾಸ್ಯದ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.

ಸಂಸದ ಭಗವಂತ ಖೂಬಾ ಉದ್ಘಾಟಿಸಿ ಮಾತನಾಡಿ, ‘ನಾಡು ನುಡಿಯ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದರು.

ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ‘ನಾವು ಅನ್ಯ ಭಾಷೆಯನ್ನು ಅಪ್ಪಿಕೊಳ್ಳುವ ಮೂಲಕ ಪರೋಕ್ಷವಾಗಿ ಮಾತೃ ಭಾಷೆಯ ಕೊಲೆ ಮಾಡುತ್ತಿದ್ದೇವೆ. ಕನ್ನಡವನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಗಡಿಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಸಾಣೆಹಳ್ಳಿಯ ನಾಟಕ ತಂಡ ಹಾಗೂ ಮೈಸೂರಿನ ರಂಗಾಯಣ ಕಲಾವಿದರು ಬೀದರ್‌ನಲ್ಲಿ ನಾಟಕ ಪ್ರದರ್ಶನ ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ಹಾಗೂ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಪಾಟೆ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಆಕಾಶ ಪಾಟೀಲ ಚಿಮಕೋಡ, ಪವನ ಬಿರಾದಾರ, ಶರಣಪ್ಪ ಪಂಚಾಕ್ಷರಿ, ಸತೀಶ ಪಾಂಚಾಳ, ಜಯರಾಜ ಕೊಳ್ಳಾ, ವೆಂಕಟೇಶ್ವರ ಚಾರಿಟಬಲ್‌ ಟ್ರಸ್ಟ್‌ನ ಅಶೋಕ ನಾಗೂರೆ ಇದ್ದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ,ಪತ್ರಕರ್ತ ನಾಗಶೆಟ್ಟಿ ಧರ್ಮಪೂರ ಹಾಗೂ ಪ್ರಥ್ವಿರಾಜ್ ಅವರನ್ನು ಸನ್ಮಾನಿಸಲಾಯಿತು. ನಾಟ್ಯಶ್ರೀ ನೃತ್ಯಾಲಯದ ಬಾಲಕರು ಭರತನಾಟ್ಯ ಪ್ರದರ್ಶಿಸಿದರು. ಪ್ರಶಾಂತ ಹೊನ್ನಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT