ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಆರಂಭ

ಜಿಲ್ಲೆಯಲ್ಲಿ 5 ಹಳೆಯ, 10 ಹೊಸ ವಾಹನಗಳು ಸೇವೆಗೆ
Last Updated 25 ಜನವರಿ 2021, 13:36 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು (ಇಆರ್‌ಎಸ್‌ಎಸ್) ಆರಂಭಿಸಲಾಗಿದೆ. ಸಾರ್ವಜನಿಕರು, ಮಹಿಳೆಯರು, ನೊಂದವರು, ಹಿರಿಯ ನಾಗರಿಕರು ತುರ್ತು ಸಂದರ್ಭದಲ್ಲಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112ಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ತಿಳಿಸಿದರು.

ಈ ಮೊದಲು ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆಂಬುಲನ್ಸ್ ಸೇವೆಗೆ ಬೇರೆ ಬೇರೆ ಸಂಖ್ಯೆಗೆ ಕರೆ ಮಾಡಬೇಕಿತ್ತು. ಇದೀಗ ಎಲ್ಲ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ 112 ಗೊತ್ತುಪಡಿಸಲಾಗಿದೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ತುರ್ತು ಸಮಯದಲ್ಲಿ ತೊಂದರೆಗೊಳಗಾದ ವ್ಯಕ್ತಿಯನ್ನು ಮೊದಲು ಪೊಲೀಸ್‌ ಸಿಬ್ಬಂದಿಯೇ ಸಂಪರ್ಕಿಸಲಿದ್ದಾರೆ.ಅಪಘಾತ, ಅಪರಾಧ ಹಾಗೂ ವಿಪತ್ತು ಸಂಭವಿಸಿದಾಗ ಆ ಸ್ಥಳಕ್ಕೆ ಬಂದು ತಕ್ಷಣಕ್ಕೆ ಬೇಕಾದ ನೆರವು ನೀಡಿ ರಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

112 ಆ್ಯಪ್‌ನಲ್ಲಿ ವಿಳಾಸ, ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆ ದಾಖಲು ಮಾಡಬೇಕು. ಅಪಾಯಕ್ಕೆ ಸಿಲುಕಿದಾಗ ತಕ್ಷಣ ಆ್ಯಪ್ ಓಪನ್ ಮಾಡಿ 112 ಗೆ ಕರೆ ಮಾಡಿದಾಗ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ. ಜತೆಗೆ ನಾವಿರುವ ಸ್ಥಳದ ಮಾಹಿತಿಯೂ ದೊರಕುತ್ತದೆ. ನಂತರ ವ್ಯಕ್ತಿ ಇರುವ ಸ್ಥಳದ ಸಮೀಪದಲ್ಲಿನ ವಾಹನ ಅವರ ಬಳಿಗೆ ಬರುತ್ತದೆ ಎಂದರು.

ತೊಂದರೆಗೊಳಗಾದ ವ್ಯಕ್ತಿಗೆ ಅಪಘಾತವಾಗಿದ್ದಲ್ಲಿ ಆಸ್ಪತ್ರೆಗೆ ಕರೆ ವರ್ಗಾವಣೆ ಆಗುತ್ತದೆ. ಅಪರಾಧವಾಗಿದ್ದಲ್ಲಿ ಪೊಲೀಸ್ ಇಲಾಖೆಗೆ ಮತ್ತು ವಿಪತ್ತು ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೆ ಕರೆಯನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ಯಾನಿಕ್ ಅಲರ್ಟ್ ಗಾಗಿ ಸಾಮಾನ್ಯ ಮೊಬೈಲ್ ನಲ್ಲಿ 5 ಹಾಗೂ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತಬೇಕು.ಸ್ಮಾರ್ಟ್ ಪೋನ್ ಆಗಿದ್ದಲ್ಲಿ ಪವರ್ ಬಟನ್ ಅನ್ನು ವೇಗವಾಗಿ 3 ರಿಂದ 5 ಬಾರಿ ಒತ್ತಿದ್ದರೆ ನೀವು ಅಪಾಯದಲ್ಲಿರುವ ಮಾಹಿತಿ ಕಂಟ್ರೋಲ್ ರೂಂಗೆ ಹೋಗುತ್ತದೆ. ತಕ್ಷಣವೇ ಸಿಬ್ಬಂದಿ ನೀವು ಇರುವಲ್ಲಿಗೆ ಬರಲಿದ್ದಾರೆ ಎಂದು ಹೇಳಿದರು.

ಇಆರ್‌ಎಸ್‌ಎಸ್ ಕಾರ್ಯಕ್ಕೆ ಐದು ಹಳೆಯ ಹಾಗೂ 10 ಹೊಚ್ಚ ಹೊಸ ತುರ್ತು ಸ್ಪಂದನ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾಹನದಲ್ಲಿ 3 ಜನ ಸಿಬ್ಬಂದಿ ಇರುವರು. ವಾಹನ ದಿನದ 24 ಗಂಟೆಯೂ ಸೇವೆ ಒದಗಿಸಲಿದೆ.ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ 112 ಸಂಖ್ಯೆಗೆ ಕರೆ ಮಾಡಬಹುದು. ಸಂದೇಶವನ್ನೂ ರವಾನಿಸಬಹುದು. 112 ವೆಬ್ ಪೋರ್ಟಲ್ (www.ka.ners.in) ಮೂಲಕ ಸಹಾಯ ಕೋರಬಹುದು.

ಸಹಾಯ ಪಡೆಯುವುದು ಹೇಗೆ?
ಪೊಲೀಸ್ ಇಲಾಖೆ 112 ತುರ್ತು ಕರೆಯ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದೆ. 112 ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ಫೋನ್ನಲ್ಲಿ ಪ್ಲೇ ಸ್ಟೋರ್‌ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್ ಫೋನ್‌ನಲ್ಲಿ 112 ಇಂಡಿಯಾ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಎಸ್.ಓ.ಎಸ್ (SOS) ಸೇವೆ ಬಳಕೆ ಮಾಡಬಹುದು. ಇ-ಮೇಲ್ ಐಡಿ erss112ktk@ksp.gov.in ಗೆ ಸಂದೇಶ ಕಳುಹಿಸುವುದರ ಮೂಲಕ ಸಹಾಯ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT