ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ನಿರ್ಮೂಲನೆಗೆ ಬೇಕು ಪ್ರತಿಯೊಬ್ಬರ ಸಹಕಾರ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅನಿಲ ಚಿಂತಾಮಣಿ ಹೇಳಿಕೆ
Last Updated 25 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೀದರ್‌: ‘ಮಲೇರಿಯಾ ನಿರ್ಮೂಲನೆಗೆ ಆರೋಗ್ಯ ಇಲಾಖೆಯು ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಮಾತ್ರ ಮಲೇರಿಯಾ ನಿರ್ಮೂಲನೆ ಸಾಧ್ಯ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅನಿಲ ಚಿಂತಾಮಣಿ ತಿಳಿಸಿದರು.

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಇಲ್ಲಿಯ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಕರ್ತರಿಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಮನೆಯ ಸುತ್ತಲು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ರಾತ್ರಿ ಮಲಗುವ ಮುನ್ನ ಬೇವಿನ ಸೊಪ್ಪಿನ ಹೊಗೆ ಹಾಕಿ ಕೂಡ ಸೊಳ್ಳೆಗಳನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದರು.

‘ಚಳಿ ನಂತರ ವಿಪರೀತ ಜ್ವರ, ಸ್ವಲ್ಪ ಹೊತ್ತಿನ ನಂತರ ಮೈ ಬೆವರುವುದು, ಮೈ ಕೈ ನೋವು, ತಲೆ ನೋವು, ಹಲವರಿಗೆ ವಾಂತಿ, ನಂತರ ನಿಶ್ಯಕ್ತಿ ಈ ಲಕ್ಷಣಗಳು ದಿನ ಬಿಟ್ಟು ದಿನ ಅಥವಾ ಪ್ರತಿ ದಿನ ಬರಬಹುದು. ಇಂತಹ ಲಕ್ಷಣಗಳು ಕಂಡ ಬಂದರೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬ್ರಿಮ್ಸ್‌ ಸಹ ಪ್ರಾಧ್ಯಾಪಕ ಡಾ.ದಿಲೀಪ್ ರಾಠೋಡ ಮಾತನಾಡಿ, ‘ಅನಾಫಿಲಸ್ ಹೆಣ್ಣು ಸೊಳ್ಳೆಗಳಿಂದ ರೋಗ ಹರಡುತ್ತದೆ. ಮಲೇರಿಯಾ ಪೀಡಿತ ರೋಗಿಗೆ ಕಚ್ಚಿದ ಸೊಳ್ಳೆ ಬೇರೊಬ್ಬರಿಗೆ ಕಚ್ಚಿದರೂ ರೋಗ ಹರಡುತ್ತದೆ’ ಎಂದರು.

‘ಆಫ್ರಿಕಾದ ಕಾಡುಗಳಲ್ಲಿ ಮಲೇರಿಯಾ ರೋಗಿಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಪ್ರಾಣಿಗಳ ಮೂಲಕವೂ ಅದು ಹರಡುತ್ತದೆ. ಚಿಂಪಾಜಿಯಿಂದ ಮಲೇರಿಯಾ ಹೆಚ್ಚು ಹರಡುತ್ತದೆ. ಭಾರತದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಲೇರಿಯಾದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.

‘ಆಧುನಿಕ ತಂತ್ರಜ್ಞಾನದ ಸಂಶೋಧನೆಯ ಫಲವಾಗಿ ಇಂದು ಎಲ್ಲ ವಯಸ್ಸಿನವರಿಗೂ ಮಾತ್ರೆಗಳಳು ಲಭ್ಯ ಇವೆ. ರಕ್ತ ಮಾದರಿಯಲ್ಲಿ ಮಲೇರಿಯಾ ದೃಢಪಟ್ಟರೆ ತಕ್ಷಣ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ಸದಾಶಿವ, ರಾಜಶೇಖರ ತಂಬಾಕೆ, ಮಹಮ್ಮದ್ ರಫಿ, ಶಿವಕಾಂತ ಮಿತ್ರಾ, ದೇವಿದಾಸ ಕಮಲಾಕರ್ ಇದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುದಾಳೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT