ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿಗೊಂದು ವಿದ್ಯಾರ್ಥಿ ವಸತಿ ನಿಲಯ

ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ  ಈಶ್ವರ ಖಂಡ್ರೆ ಹೇಳಿಕೆ
Last Updated 27 ಸೆಪ್ಟೆಂಬರ್ 2019, 15:01 IST
ಅಕ್ಷರ ಗಾತ್ರ

ಬೀದರ್: ‘ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ತಾಲ್ಲೂಕಿಗೊಂದು ವಿದ್ಯಾರ್ಥಿ ವಸತಿ ನಿಲಯ ಸ್ಥಾಪಿಸಲಾಗುವುದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಾನಗಲ್ ಕುಮಾರಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ಈಗಾಗಲೇ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಐಎಎಸ್, ಕೆಎಎಸ್ ತರಬೇತಿ ಕೊಡಿಸಲು ತರಬೇತಿ ಕೇಂದ್ರವನ್ನೂ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಮೌಲ್ಯಯುತ ಶಿಕ್ಷಣದ ಕೊರತೆಯೇ ಪ್ರಸ್ತುತ ಸಮಾಜದಲ್ಲಿ ಅನ್ಯಾಯ, ಅನೀತಿ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ. ವ್ಯಸನಗಳಿಗೆ ದಾಸರಾಗಿ ಮಕ್ಕಳೇ ತಂದೆ-ತಾಯಿಯನ್ನು ಕೊಲೆ ಮಾಡುತ್ತಿರುವ ಪ್ರಕರಣಗಳು ಬೇಸರ ಉಂಟು ಮಾಡುತ್ತಿವೆ’ ಎಂದು ಹೇಳಿದರು.

‘ಮಕ್ಕಳಿಗೆ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ವಚನ ಸಾಹಿತ್ಯದ ಅಧ್ಯಯನದಿಂದ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬಹುದಾಗಿದೆ’ ಎಂದು ಹೇಳಿದರು.

116 ವಿದ್ಯಾರ್ಥಿಗಳಿಗೆ ತಲಾ ₹ 2 ಸಾವಿರದ ಚೆಕ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಉಮಾಕಾಂತ ನಾಗಮಾರಪಳ್ಳಿ (ಸಹಕಾರ ಭೀಷ್ಮ), ಅಬ್ದುಲ್ ಖದೀರ್ (ಶಿಕ್ಷಣ ರತ್ನ), ಬಸವೇಶ್ವರ ಹೀರಾ (ಆರಕ್ಷಕ ರತ್ನ), ಭೀಮರಾವ್ ಬುರಾನಪುರ, ಸುರೇಶ ನಾಯಕ್ (ಪತ್ರಿಕಾ ರತ್ನ), ಅಕ್ಕ ಪ್ರತಿಮಾ (ಆಧ್ಯಾತ್ಮಿಕ ರತ್ನ), ಬಾಬುರಾವ್ ಬಿರಾದಾರ (ಬಸವಶ್ರೀ ರತ್ನ), ಶರಣಪ್ಪ ಬಲ್ಲೂರ (ಕೃಷಿ ರತ್ನ), ಡಾ. ಜಗದೀಶ ಕೋಟೆ (ವೈದ್ಯಕೀಯ ರತ್ನ), ಜಗದೀಶ ಜಗತಾಪ (ನ್ಯಾಯವಾದಿ ರತ್ನ), ಎಂ.ಜಿ. ದೇಶಪಾಂಡೆ (ಸಾಹಿತ್ಯ ಭೀಷ್ಮ), ಹಾವಶೆಟ್ಟಿ ಪಾಟೀಲ (ತಾಂತ್ರಿಕ ರತ್ನ), ಗವಣ್ಣ ಕೋಟೆ (ಸಮಾಜ ರತ್ನ), ವಿಶ್ವನಾಥ ಸ್ವಾಮಿ (ಹಿರಿಯ ನಾಗರಿಕ ರತ್ನ), ವೈಜಿನಾಥ ಸಜ್ಜನಶೆಟ್ಟಿ (ಸಂಗೀತ ಕಲಾ ರತ್ನ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಗ್ರಂಥಪಾಲಕ ವಿ.ಬಿ. ಚನಶೆಟ್ಟಿ, ನಿವೃತ್ತ ಪ್ರಾಚಾರ್ಯ ಶಾಂತಪ್ಪ ಭರಶೆಟ್ಟಿ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಶರಣಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಮಹಾಸಭಾ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ. ಭೀಮಣ್ಣ ಖಂಡ್ರೆ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಸದಸ್ಯ ಧನರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಶಾಸಕ ರಹೀಂಖಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಾಬುರಾವ್ ತುಂಬಾ, ರಾಜ್ಯ ಕಾರ್ಯದರ್ಶಿ ಶಿವನಾಥ ಪಾಟೀಲ, ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ದಿಲೀಪ ಕಮಠಾಣೆ, ಪ್ರಕಾಶ ಲಕ್ಕಶೆಟ್ಟಿ ಉಪಸ್ಥಿತರಿದ್ದರು.

ಸಂಗಶೆಟ್ಟಿ ಹಲಬುರ್ಗೆ ಸ್ವಾಗತಿಸಿದರು. ಮಹಮ್ಮದ್ ಯುನೂಸ್ ನಿರೂಪಿಸಿದರು.ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜು ಪ್ರಾಚಾರ್ಯ ನಾಗೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT