ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಿ

ಗೋರಟಾದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ
Last Updated 29 ನವೆಂಬರ್ 2020, 15:27 IST
ಅಕ್ಷರ ಗಾತ್ರ

ಬೀದರ್‌: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಿ ಅದಕ್ಕೆ ₹ 10 ಕೋಟಿ ಅನುದಾನ ಮಾಡಬೇಕು ಎಂದು ಗೋರಟಾದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

ಜಾಗತಿಕ ಧರ್ಮ-ದರ್ಶನಗಳಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿರುವ ವೀರಶೈವ-ಲಿಂಗಾಯತ ಧರ್ಮ ಪ್ರಪಂಚದ ಅತ್ಯಂತ ಪುರಾತನ ಮತ್ತು ಸನಾತನ ಧರ್ಮವಾಗಿದೆ ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ರೇಣುಕಾದಿ ಪಂಚಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಮತ್ತು ಬಸವಾದಿ ಶಿವಶರಣರಿಂದ ಉದ್ಧರಿಸಲ್ಪಟ್ಟ ವೀರಶೈವ ಲಿಂಗಾಯತ ಧರ್ಮವು ಎಲ್ಲರ ಒಳಿತನ್ನು ಬಯಸುತ್ತದೆ. ಸ್ವ ಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಇದರ ಧ್ಯೇಯವಾಗಿದ್ದು, ಯಾರಲ್ಲಿಯೂ ವಿರೋಧಭಾವ ತಾಳದೇ ಎಲ್ಲರೊಂದಿಗೆ ಸದ್ವಿನಯ ಮತ್ತು ಸ್ನೇಹಭಾವದೊಂದಿಗೆ ಕೂಡಿ ನಡೆಯುವುದು ಇದರ ಮೂಲ ಮಂತ್ರವಾಗಿದೆ ಎಂದು ತಿಳಿಸಿದ್ದಾರೆ.

ಲಿಂಗಧಾರಣೆ ವೀರಶೈವದ ಪ್ರಾಣಜೀವಾಳವಾಗಿದ್ದು, ವೇದ ಮತ್ತು ಅದರಾಚೆಗಿನ ಹರಪ್ಪ ನಾಗರಿಕತೆಯಲ್ಲಿ ಇದರ ಕುರುಹುಗಳು ನಿಚ್ಚಳವಾಗಿ ತೋರುತ್ತವೆ. ಶಿವಾಗಮಗಳು, ಸಿದ್ಧಾಂತ ಶಿಖಾಮಣಿ ಮತ್ತು ವಚನ ವಾಙ್ಮಯಗಳು ಪ್ರಮುಖ ಮೂರು ಆಕರಗಳ ಆಧಾರ ಸ್ತಂಭಗಳಾದರೆ, ಅರಿವು-ಆಚಾರ, ಉದಾರತೆ ಮತ್ತು ದಾಸೋಹ ಇದರ ಇನ್ನೆರಡು ಹೆಬ್ಬೆಳಕಿನ ಹೆದ್ದಾರಿಗಳಾಗಿವೆ ಎಂದು ಹೇಳಿದ್ದಾರೆ.

ಪಂಚಪೀಠಗಳು-ವಿರಕ್ತ ಪೀಠಗಳು ಮತ್ತು ಅಸಂಖ್ಯಾತ ಗುರು-ವಿರಕ್ತ ಮಠಮಾನ್ಯಗಳು, ಸಂತ ಶರಣರು, ಅನುಭಾವಿಗಳು ದೇಶದ ಸಂಸ್ಕೃತಿ, ಪರಂಪರೆ, ಏಕತೆ, ಸೋದರತ್ವಕ್ಕೆ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆ, ಜ್ಞಾನ, ದಾಸೋಹ ಮತ್ತು ಜನ-ಜೀವನದ ಸರ್ವಾಂಗಿಣ ವಿಕಾಸಕ್ಕೆ ನೀಡಿದ ಕೊಡುಗೆಗಳು ಅಪಾರ ಮತ್ತು ಅಗಣಿತವಾಗಿವೆ. ಈ ಉದಾತ್ತ ಮೌಲಿಕವಾದ ಜೀವನ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT