ಬಿಎಸ್‌ಪಿಗೆ ಬೆಂಬಲ ಘೋಷಿಸಿದ ಲೈಕೋದ್ದಿನ್; ಕಾಂಗ್ರೆಸ್ ಕಾರ್ಯವೈಖರಿಗೆ ಅಸಮಾಧಾನ

ಸೋಮವಾರ, ಏಪ್ರಿಲ್ 22, 2019
31 °C

ಬಿಎಸ್‌ಪಿಗೆ ಬೆಂಬಲ ಘೋಷಿಸಿದ ಲೈಕೋದ್ದಿನ್; ಕಾಂಗ್ರೆಸ್ ಕಾರ್ಯವೈಖರಿಗೆ ಅಸಮಾಧಾನ

Published:
Updated:
Prajavani

ಬೀದರ್: ‘ಕಾಂಗ್ರೆಸ್‌ ಮುಸ್ಲಿಂರನ್ನು ಕಡೆಗಣಿಸಿ ಸಮುದಾಯಕ್ಕೆ ನೋವು ಉಂಟು ಮಾಡಿದೆ. ಹೀಗಾಗಿ ಬೀದರ್ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ಶಾನುಲ್ ಹಕ್ ಬುಖಾರಿಗೆ ಬೆಂಬಲಿಸಲು ನಿರ್ಧರಿಸಿದ್ದೇನೆ. ಈ ಚುನಾವಣೆಯಲ್ಲಿ ನನ್ನ ಬೆಂಬಲಿಗರು ಬುಖಾರಿ ಪರ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಾಜಿ ಶಾಸಕ ಮಹಮ್ಮದ್‌ ಲೈಕೋದ್ದಿನ್ ಹೇಳಿದರು.

‘ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕತ್ತಲೆಯಲ್ಲಿಟ್ಟು, ಜಿಲ್ಲೆಯ ಹಿರಿಯ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ನಾಯಕರ ನಿರ್ಧಾರದಿಂದ ಬೇಸತ್ತು ಬಿಎಸ್‌ಪಿ ಅಭ್ಯರ್ಥಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದೇನೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲ ಸಮುದಾಯದವರನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಅಭ್ಯರ್ಥಿಗಳು ಇದ್ದಾಗಲೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರನ್ನು ಅಭ್ಯರ್ಥಿಯಾಗಿಸಿದ್ದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈಶ್ವರ ಖಂಡ್ರೆ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವನ್ನು ಪೋಷಿಸಿದಂತಾಗಿದೆ. ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ಉತ್ತಮ ವಾಗ್ಮಿಯೂ ಆಗಿರುವ ಬುಖಾರಿ ಅವರನ್ನು ಬೆಂಬಲಿಸುವುದೇ ಸೂಕ್ತ’ ಎಂದು ತಿಳಿಸಿದರು.

ಬಿಎಸ್‌ಪಿ ಅಭ್ಯರ್ಥಿ ಶಾನುಲ್ ಹಕ್ ಬುಖಾರಿ ಅವರು, ‘ಲೋಕಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಬಹುಸಂಖ್ಯಾತರಿದ್ದರೂ ಟಿಕೆಟ್ ಆಯ್ಕೆಯಲ್ಲಿ ಅನ್ಯಾಯ ಮಾಡಲಾಗಿದೆ. ಕೇವಲ ಮತಕ್ಕಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಹಕ್ಕು ಉಳಿಸಿಕೊಳ್ಳಲು ಮುಸ್ಲಿಮರು ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

‘ನಾನು ಮೊದಲು ಕಾಂಗ್ರೆಸ್‌ನಲ್ಲಿ ಇದ್ದೆ. ಮುಸ್ಲಿಂರನ್ನು ಕಡೆಗಣಿಸಿದ ಕಾರಣ ಬಿಎಸ್‌ಪಿ ಸೇರಬೇಕಾಯಿತು. ರಾಜಕೀಯ ಅಧಿಕಾರ ಹಿಡಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು’ ಎಂದು ತಿಳಿಸಿದರು.

‘ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಮುಸ್ಲಿಂರ ಸ್ವಾಭಿಮಾನಕ್ಕಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮುಸ್ಲಿಂ ಹಾಗೂ ಬಿಎಸ್‌ಪಿ ಸಾಂಪ್ರದಾಯಿಕ ಮತಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ್ ಗೋಖಲೆ, ಪ್ರಮುಖರಾದ ವಿಠ್ಠಲ್ ಡಾಕುಳಗಿ, ಸೈಯದ್ ಮಂಜೂರ್ ಹುಸೇನ್, ಸಲಿಮೋದ್ದೀನ್ ಔರಾದ್, ಖಾವರ್ ಖಾದ್ರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !