ಸೋಮವಾರ, ಸೆಪ್ಟೆಂಬರ್ 27, 2021
21 °C
ಮಿಶ್ರ ಬೇಸಾಯ ಅಳವಡಿಸಿಕೊಂಡ ಶಿವಕುಮಾರ ರೆಡ್ಡಿ

ಖಟಕಚಿಂಚೋಳಿ: ಟೊಮೆಟೊ ಬೆಳೆದು ಲಾಭ ಕಂಡ ರೈತ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಸಿಂದಬಂದಗಿ ಗ್ರಾಮದ ರೈತ ಶಿವಕುಮಾರ ರೆಡ್ಡಿ ಟೊಮೆಟೊ ಬೆಳೆದು ₹2 ಲಕ್ಷ ಆದಾಯ ಗಳಿಸುವ ಮೂಲಕ ಯಶಸ್ಸು ಗಳಿಸಿದ್ದಾರೆ.

ಲಾಕ್‌ಡೌನ್ ಘೋಷಣೆಯಿಂದ ಬಹುತೇಕ ರೈತರು ತರಕಾರಿ ಬೆಳೆದು ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೆ ಶಿವಕುಮಾರ ಎದೆಗುಂದದೆ ಕೇವಲ ಮೂರು ತಿಂಗಳ ಬೆಳೆಯಾದ ಟೊಮೆಟೊ ಬೆಳೆದು ಉತ್ತಮ ಆದಾಯ ಪಡೆದಿದ್ದಾರೆ.

ಪದವೀಧರರಾಗಿರುವ ಅವರು ತಮ್ಮ 4 ಎಕರೆ ಜಮೀನಿನಲ್ಲಿ  ಸಮ್ಮಿಶ್ರ ಬೇಸಾಯ ಕೈಗೊಂಡಿದ್ದಾರೆ. ಅವರೊಂದಿಗೆ ಸಹೋದರ ಪ್ರಶಾಂತ ರೆಡ್ಡಿ  ಸಾಥ್ ನೀಡಿದ್ದಾರೆ. 10 ಅಡಿ ಅಂತರದಲ್ಲಿ ಕಬ್ಬು ಹಾಕಿದ್ದಾರೆ. ಅದರ ಮಧ್ಯದಲ್ಲಿ ಈಗಾಗಲೇ ಕಲ್ಲಂಗಡಿ ಬೆಳೆದು ₹2 ಲಕ್ಷ ಆದಾಯ ಗಳಿಸಿದ್ದಾರೆ. ಅದೇ ಸ್ಥಳದಲ್ಲಿ ಸದ್ಯ ಟೊಮೆಟೊ ಬೆಳೆದು ಆದಾಯ ಪಡೆದಿದ್ದಾರೆ.

‘ಹೊಲಕ್ಕೆ ಕೇವಲ ರಾಸಾಯನಿಕ ಗೊಬ್ಬರ ಬಳಸದೇ ಕುರಿ ಗೊಬ್ಬರ, ತಿಪ್ಪೆಗೊಬ್ಬರ , ಜೀವಾಮೃತ ಹಾಗೂ ಗೋ ಕೃಪಾಮೃತ ಸಿಂಪಡಿಸಿದ್ದೇನೆ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಅವರು.

‘ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರಕ್ಕೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶ ನೀಡಿರುವುದರಿಂದ ಬಹುತೇಕ ರೈತರಿಗೆ ಬೆಂಬಲ ಬೆಲೆ ಸಿಗದೆ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಆದರೆ ನನಗೆ ಟೊಮೆಟೊ ಕೈಗೆ ಬಂದಾಗ ವ್ಯಾಪಾರದ ಅವಧಿಯಲ್ಲಿ ವಿಸ್ತರಣೆ ಆಯಿತು. ಹೀಗಾಗಿ ಟೊಮೆಟೊ ಬೆಲೆ ಪ್ರತಿ 25 ಕೆಜಿಯ ಕ್ಯಾರೆಟ್ ಬೆಲೆ ₹400- 500ಗೆ ಮಾರಾಟವಾಗುತ್ತಿದೆ. ಹೀಗಾಗಿ ಲಾಭವಾಗಿದೆ’ ಎಂದು ಅವರು ತಿಳಿಸಿದರು.

‘ವೈಜ್ಞಾನಿಕ ತಂತ್ರಜ್ಞಾನ ಪದ್ಧತಿ ಹಾಗೂ ಹಿರಿಯರಾದ ರವಿ ಪಾಟೀಲ ಹೊನ್ನಿಕೇರಿ, ಕಂಠಯ್ಯ ಸ್ವಾಮಿ, ಅಭಿಮನ್ಯು ಅವರ
ಮಾರ್ಗದರ್ಶನದಿಂದಲೇ ನಾನು ಹೆಚ್ಚಿನ ಆದಾಯ ಗಳಿಸಲು ಸಹಾಯವಾಯಿತು. ಒಟ್ಟು 4 ಎಕರೆಯಿಂದ ವರ್ಷದಲ್ಲಿ 10 ಲಕ್ಷ ಆದಾಯವನ್ನು ಪಡೆಯುತ್ತಿದ್ದೇನೆ. ಒಂದು ಬೆಳೆಯನ್ನು ನಂಬಿ ಕೃಷಿ ಮಾಡುವುದು ಸೂಕ್ತವಾದ ಬೇಸಾಯ ಪದ್ಧತಿಯಲ್ಲ, ನಾಲ್ಕೈದು ಬೆಳೆ ಮಾಡಿದರೆ ಒಂದಿಲ್ಲ ಒಂದು ಬೆಳೆಗೆ ಉತ್ತಮ ಬೆಲೆ ಸಿಕ್ಕಿ ಆದಾಯ ಸ್ಥಿರವಾಗಿರುತ್ತದೆ, ಜಮೀನನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಬಹು ಬೆಳೆ ಮಾಡಿದರೆ ನಷ್ಟದ ಮಾತಿಲ್ಲ’ ಎಂದು ಹೇಳುತ್ತಾರೆ ರೈತ ಶಿವಕುಮಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು