ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ರೈತರಿಗೆ ನೆರೆ ರಾಜ್ಯದ ನಂಟೇ ಹೆಚ್ಚು

ಎಪಿಎಂಸಿಯಲ್ಲಿ ಕೊನೆಗಾಣದ ಸಮಸ್ಯೆ–ರೈತರಿಗೆ ನಿತ್ಯ ಸಮಸ್ಯೆ
Last Updated 20 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಜಿಲ್ಲೆ ರಾಜ್ಯದ ಮುಕುಟ ಮಣಿಯಂತಿದ್ದರೂ ಇಲ್ಲಿಯ ರೈತರಿಗೆ ಎಪಿಎಂಸಿಗಳಿಂದ ಹೆಚ್ಚು ಅನುಕೂಲವಾಗಿಲ್ಲ. ಕಮಿಷನ್‌ ಹಾವಳಿ ಮತ್ತು ಕೃಷಿ ಉತ್ಪನ್ನಗಳಿಗೆ ಬೆಲೆಯೂ ಕಡಿಮೆ ದೊರೆಯುತ್ತಿರುವ ಕಾರಣ ರೈತರು ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದ ಜಿಲ್ಲೆಗಳಿಗೆ ತೆರಳಿ ಕೃಷಿ ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಬಸವಕಲ್ಯಾಣ, ಹುಲಸೂರು, ಭಾಲ್ಕಿ, ಔರಾದ್‌ ಮತ್ತು ಕಮಲನಗರದ ಬಹುತೇಕ ರೈತರು ಕೃಷಿ ಉತ್ಪನ್ನಗಳನ್ನು ಮಹಾರಾಷ್ಟ್ರದ ಉದಗಿರ, ಲಾತೂರ್ ಮತ್ತು ನಾಂದೇಡ್‌ಗೆ ಕಳಿಸುತ್ತಿದ್ದರೆ. ಹುಮನಾಬಾದ್‌ ಮತ್ತು ಚಿಟಗುಪ್ಪದ ರೈತರು ಚಿಂಚೋಳಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ.

ಜಿಲ್ಲೆಯ ಕೆಲ ಎಪಿಎಂಸಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವ ಕಾರಣ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ಮಾರುಕಟ್ಟೆ’ ಘೋಷಣೆ ಮಾಡಿದಾಗಿನಿಂದ ಇನ್ನಷ್ಟು ಸೌಲಭ್ಯಗಳ ಕೊರತೆ ಎದುರಾಗಿದೆ.

ಬೇರೆ ಇಲಾಖೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿದೆ. ಎಪಿಎಂಸಿಗಳಲ್ಲಿ ಮೂಲಸೌಕರ್ಯ ಎನ್ನುವುದು ಮರೀಚಿಕೆಯಾಗಿದೆ.

‘ಜಿಲ್ಲೆಯ ಎಪಿಎಂಸಿಗಳಿಗೆ ಹೋಲಿಸಿದರೆ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲೇ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಮಹಾರಾಷ್ಟ್ರದ ಲಾತೂರ್‌, ಉದಗಿರ ಹಾಗೂ ಹೈದರಾಬಾದ್‌ ಮಾರುಕಟ್ಟೆಗೆ ಸರಕು ಸಾಗಣೆಯಾಗುತ್ತಿದೆ. ಕಡಿಮೆ ಉತ್ಪನ್ನಗಳನ್ನು ಬೆಳೆದವರು ಮಾತ್ರ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ’ ಎಂದು ಪ್ರಗತಿಪರ ರೈತ ರವೀಂದ್ರ ಪಾಟೀಲ ಹೇಳುತ್ತಾರೆ.

ಬೀದರ್‌ನಲ್ಲಿ ಧಾನ್ಯ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆ ಮಾಡಿದ ಮೇಲೆ ರೈತರಿಗೆ ತಕ್ಕ ಮಟ್ಟಿಗೆ ಸೌಲಭ್ಯಗಳು ಲಭಿಸುತ್ತಿವೆ. ಬೀದರ್, ಔರಾದ್‌ ಹಾಗೂ ಭಾಲ್ಕಿ ತಾಲ್ಲೂಕಿನ ಅನೇಕ ಗ್ರಾಮಗಳ ರೈತರು ತಮ್ಮ ಉತ್ಪನ್ನಗಳನ್ನು ಬೀದರ್‌ ಮಾರುಕಟ್ಟೆಯಲ್ಲಿಯೇ ಮಾರುತ್ತಾರೆ.

ಬಸವಕಲ್ಯಾಣದಲ್ಲಿ ಎಪಿಎಂಸಿಯ 64 ಮತ್ತು ನಗರಸಭೆ ಆಧೀನದ 50 ಮಾರಾಟ ಮಳಿಗೆಗಳಿವೆ. ಆದರೂ ತಾಲ್ಲೂಕಿನ ರೈತರು ಮಹಾರಾಷ್ಟ್ರದ ಲಾತೂರ್ ಮತ್ತು ಕಲಬುರ್ಗಿಗೆ ಕೃಷಿ ಉತ್ಪನ್ನ ಮಾರಾಟಕ್ಕೆ ಹೋಗುವುದು ವಾಡಿಕೆಯಾಗಿದೆ. ಅನಿವಾರ್ಯವಾದಾಗ ಮತ್ತು ಕಡಿಮೆ ಧಾನ್ಯ ಇದ್ದವರು ಮಾತ್ರ ಇಲ್ಲಿಗೆ ಬರುತ್ತಾರೆ. ಹೀಗಾಗಿ ಹೆಚ್ಚಿನ ಮಳಿಗೆಗಳಲ್ಲಿ ಅನ್ಯ ವ್ಯಾಪಾರ ನಡೆಯುತ್ತದೆ.

ಹುಮನಾಬಾದ್‌ ಎಪಿಎಂಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೂ ಅದು ಹಾಳಾಗಿದೆ. ರೈತರು ಮತ್ತು ವರ್ತಕರು, ಕುಡಿಯುವ ನೀರಿಗಾಗಿ ಸಮೀಪದ ಹೋಟೆಲ್‌ಗಳಿಗೆ ತೆರಳಬೇಕಾಗಿದೆ. ಹಳ್ಳಿಗಳಿಂದ ಬರುವ ರೈತರಿಗೆ ಸಾರ್ವಜನಿಕ ಶೌಚಾಲಯವೂ ಇಲ್ಲ. ಮಳೆ ಮತ್ತು ಚರಂಡಿ ನೀರು ರಸ್ತೆ ಮೇಲೆಯೇ ನಿಂತುಕೊಳ್ಳುತ್ತಿದೆ.

ಗ್ರಾಮಗಳಿಂದ ಮಾರುಕಟ್ಟೆಗೆ ಬರುವ ರೈತರಿಗೆ ರಾತ್ರಿ ತಂಗಲು ಸೂಕ್ತ ವ್ಯವಸ್ಥೆ ಇಲ್ಲ. ಹಳೆಯ ರೈತ ಭವನ ಇದ್ದರೂ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ರೈತರ ಅನುಕೂಲಕ್ಕಾಗಿ
ಹೊಸ ರೈತ ಭವನ ಕಟ್ಟಡ ನಿರ್ಮಿಸಬೇಕು ಎನ್ನುವುದು ಇಲ್ಲಿನ ರೈತರ ಬೇಡಿಕೆ.

ಚಿಟಗುಪ್ಪ ಎಪಿಎಂಸಿ ಪ್ರಾಂಗಣದಲ್ಲಿ ಶೇ 90ರಷ್ಟು ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಆದಾಯವೂ ಚೆನ್ನಾಗಿದೆ. ನಿರ್ಣಾ, ಮುತ್ತಂಗಿ, ಕುಡಂಬಲ್, ಉಡಬಾಳ್, ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ್, ಚೆನ್ನುರ, ಐನಾಪುರ, ನರನಾಳ, ಕನಕಪುರ ಇತರ ಗ್ರಾಮಗಳ ರೈತರು ತಮ್ಮ ಧಾನ್ಯಗಳನ್ನು ಮಾರಾಟಕ್ಕೆ ತರುತ್ತಾರೆ. ಇಲ್ಲಿಯೂ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ.

ಔರಾದ್ ಎಪಿಎಂಸಿಯಲ್ಲಿ ಸಹ ಮೂಲಸೌಲಭ್ಯದ ಕೊರತೆ ಇದೆ. ಚರಂಡಿ ಇದ್ದರೂ ಹೂಳು ತೆಗೆದಿಲ್ಲ. ರಾತ್ರಿ ವೇಳೆ ಜನ ಮಾರುಕಟ್ಟೆ ಆವರಣ ಮೂತ್ರ ವಿಜಸರ್ಜನೆಗೆ ಬಳಸುತ್ತಾರೆ. ಹೀಗಾಗಿ ದುರ್ವಾಸನೆ ಬರುತ್ತಿದೆ.
ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಿಗಳಿಗೆ ಮೂತ್ರಾಲಯ, ಶೌಚಾಲಯ ಸೌಲಭ್ಯ ಇಲ್ಲ. ಎಪಿಎಂಸಿ ಮಾರುಕಟ್ಟೆ ಬಹುತೇಕ ಅಂಗಡಿಗಳು ಶಾಲೆ, ಹೋಟೆಲ್, ವಸತಿ ನಿಲಯ ಸೇರಿದಂತೆ ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ.

ಕಮಲನಗರ ಎಪಿಎಂಸಿ ಆವರಣ ಕೊಳೆಗೇರಿಯಂತಾಗಿದೆ. ರಸ್ತೆ ಮೇಲೆಯೇ ನೀರು ಹರಿಯುತ್ತಿದೆ. ಅಲ್ಲಿ ದಾರಿ ದೀಪಗಳು ಇಲ್ಲ. ನಾಮಫಲಕ ಹಾಳಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಾಲ್ಲೂಕಿನ ರೈತರು ಅಧಿಕಾರಿಗಳೊಂದಿಗೆ ಗೋಳಾಡುವುದೇ ಬೇಡ ಎಂದು ನೆರೆಯ ಮಹಾರಾಷ್ಟ್ರಕ್ಕೆ ಹೋಗಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT