ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರನ್ನಾಗಿಸುವ ಶಿಕ್ಷಣ ಅಗತ್ಯ: ಎಚ್‌.ಎನ್‌.ನಾಗಮೋಹನದಾಸ್‌

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಹೇಳಿಕೆ
Last Updated 24 ಸೆಪ್ಟೆಂಬರ್ 2022, 12:39 IST
ಅಕ್ಷರ ಗಾತ್ರ

ಭಾಲ್ಕಿ: ‘ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿಸುವ ಹಾಗೂ ಮಾನವರನ್ನಾಗಿಸುವ ಶಿಕ್ಷಣ ಬೇಕು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದ ಅನುಭವ ಮಂಟಪದಲ್ಲಿ ಶನಿವಾರ ನಡೆದ ನೀಟ್‌, ಐಐಟಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಗುಣಾತ್ಮಕ ಹಾಗೂ ಸಮಾನ ಎಂಬ ಸಮಸ್ಯೆ ಎದುರಿಸುತ್ತಿದೆ. ಸಮಾಜದಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ಶಿಕ್ಷಣ ದೊರಕುತ್ತಿದೆ. ಆದರೆ, ಬಸವಲಿಂಗ ಪಟ್ಟದ್ದೇವರ ಗುರುಕುಲದಲ್ಲಿ ಬಡವರು, ಅನಾಥರು ಸೇರಿ ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ದೊರೆಯುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಎಂಥ ಪಠ್ಯಕ್ರಮ ಇರಬೇಕು ಎಂದು ತಿಳಿದುಕೊಳ್ಳಲು ಸಾಧ್ಯವಾಗದೆ ಇರುವುದರಿಂದಾಗಿ ಪಠ್ಯಕ್ರಮದ ಕುರಿತು ಗೊಂದಲಗಳಿವೆ. ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಆತ್ಮಹತ್ಯೆ, ಅತ್ಯಾಚಾರ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸುವ ಶಿಕ್ಷಣ ಸಮಾಜಕ್ಕೆ ಬೇಕಾಗಿದೆ ಎಂದು ಹೇಳಿದರು.

ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಮಾತನಾಡಿ,‘ಮಾನವೀಯತೆ ಇಲ್ಲದ ವಿದ್ಯೆ ಸಮಾಜಕ್ಕೆ ಮಾರಕ. ಮಾನವೀಯತೆಯಿಂದ ಬದುಕಿಗೆ ಬೆಲೆ ಬರುತ್ತದೆ. ಗುರುಕುಲದಲ್ಲಿ ಉತ್ತಮ ಬೋಧಕ ವೃಂದ ಇರುವುದರಿಂದಲೇ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಎಂಬಿಬಿಎಸ್, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ದಾಖಲಾಗುತ್ತಿದ್ದಾರೆ’ ಎಂದು ತಿಳಿಸಿದರು.

ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಪ್ರತಿಭೆ ಎಂದರೆ ಕೇವಲ ಅಂಕ ಗಳಿಕೆ ಅಲ್ಲ. ಸಮಾಜ, ದೇಶಕ್ಕೆ ಅಗತ್ಯವಾದದ್ದನ್ನು ಸೃಷ್ಟಿಸುವುದು, ರೂಪಿಸುವುದಾಗಿದೆ’ ಎಂದು ಹೇಳಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಜಿ.ಕೆ.ಕನ್‌ಸ್ಟ್ರಕ್ಸನ್ ಮಾಲೀಕ ಗುರುನಾಥ ಕೊಳ್ಳೂರು, ಜೆಸ್ಕಾಂ ಎಂಜಿನಿಯರ್ ಸಚಿನ್ ಹೊಂಡಕೆ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಹಾಗೂ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT