ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮದ ಹೋರಾಟ ನಿಲ್ಲುವುದಿಲ್ಲ: ರಾಜೇಂದ್ರಕುಮಾರ ಗಂದಗೆ

ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ
Published 27 ಅಕ್ಟೋಬರ್ 2023, 11:29 IST
Last Updated 27 ಅಕ್ಟೋಬರ್ 2023, 11:29 IST
ಅಕ್ಷರ ಗಾತ್ರ

ಬೀದರ್‌: ‘ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ‘ಕಲ್ಯಾಣ ಪರ್ವ’ ಮುಗಿದ ನಂತರ ಪುನಃ ಹೋರಾಟ ಆರಂಭವಾಗಲಿದೆ’ ಎಂದು ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಸಮಾಜದ ಹಿರಿಯ ಮುಖಂಡ ಬಸವಕುಮಾರ ಪಾಟೀಲ ಅವರು ಇತ್ತೀಚೆಗೆ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬರುವ ದಿನಗಳಲ್ಲಿ ಉತ್ತಮ ವಿಚಾರಗಳೊಂದಿಗೆ ಎಲ್ಲ ಸರಿಪಡಿಸುವ ಮಾತುಗಳನ್ನು ಆಡಿದ್ದಾರೆ. ಇತ್ತೀಚೆಗೆ ‘ಸ್ವಾಭಿಮಾನಿ ಕಲ್ಯಾಣ ಪರ್ವ’ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾರ್ಯಕ್ರಮ ಮಾಡುವ ಹಕ್ಕಿದೆ. ಅನುಭವ ಮಂಟಪ ನಿರ್ಮಾಣದಲ್ಲಿ ಬಸವರಾಜ ಪಾಟೀಲ ಸೇಡಂ ಅವರು ಕೆಲಸ ನಿರ್ವಹಿಸಿದ್ದರಿಂದ ಅವರನ್ನು ಗುರುಪೂಜೆಗೆ ಆಹ್ವಾನಿಸಲಾಗಿದೆಯೇ ಹೊರತು ಬೇರಾವ ಉದ್ದೇಶವಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಲಿಂ. ಮಾತೆ ಮಹಾದೇವಿಯವರ ಕಾರಣದಿಂದ ಕೂಡಲಸಂಗಮ ಅಭಿವೃದ್ಧಿ ಕಂಡಿದೆ. ಅವರ ಪಾದಸ್ಪರ್ಶದಿಂದ ಬಸವಕಲ್ಯಾಣ ಕೂಡ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. 108 ಅಡಿ ಎತ್ತರದ ಬಸವೇಶ್ವರರ ಪ್ರತಿಮೆ ಸ್ಥಾಪನೆಯಾದ ನಂತರ ಕಲ್ಯಾಣ ಜಗತ್ತಿನ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಈಗಾಗಲೇ ಅನುಭವ ಮಂಟಪದ ಕೆಲಸ ಪ್ರಗತಿಯಲ್ಲಿದೆ. ಈ ಸಲ ಯುವ ಬಸವ ದಳದೊಂದಿಗೆ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

ಗಲಾಟೆ ಮುನ್ನೆಚ್ಚರಿಕೆಯಿಂದ ಪೊಲೀಸರು ತಡೆದರು: ‘ಬಸವಕಲ್ಯಾಣದಲ್ಲಿ ಇತ್ತೀಚೆಗೆ ನಡೆದ ಕಲ್ಯಾಣ ಪರ್ವದ ಪೂರ್ವಭಾವಿ ಸಭೆಗೆ ಬಂದು ಗಲಾಟೆ ಮಾಡುತ್ತಾರೆ ಎಂದು ಮುನ್ನೆಚ್ಚೆರಿಕೆಯಿಂದ ಪೊಲೀಸರು ಚನ್ನಬಸವಾನಂದ ಸ್ವಾಮೀಜಿ ಹಾಗೂ ಅವರ ಬೆಂಬಲಿಗರನ್ನು ತಡೆದು ಕರೆದೊಯ್ದರು’ ಎಂದು ‘ಕಲ್ಯಾಣ ಪರ್ವ’ ಉತ್ಸವ ಸಮಿತಿ ಅಧ್ಯಕ್ಷ ಸಂಜುಕುಮಾರ ಪಾಟೀಲ ತಿಳಿಸಿದರು.

ಲಿಂಗಾಯತರಿಗೆ ಬಸವ ಧರ್ಮ ಪೀಠ ಸರ್ವೊಚ್ಚವಾದುದು. ಅದರ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಮಾತೆ ಮಹಾದೇವಿಯವರು ಹಾಗೂ ಮಾತೆ ಗಂಗಾದೇವಿಯವರ ಆಶಯದಂತೆ ‘ಲಿಂಗದೇವ’ ಪದ ಕೈಬಿಟ್ಟು ‘ಕೂಡಲಸಂಗಮದೇವ’ ಅಂಕಿತನಾಮ ಬಳಸಲಾಗುತ್ತಿದೆ ಎಂದು ಹೇಳಿದರು.

ಬಸವರಾಜ ಧನ್ನೂರ ರಾಜೀನಾಮೆ ಅಂಗೀಕಾರ: ‘ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ಅವರ ರಾಜೀನಾಮೆಯನ್ನು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರು ಅಂಗೀಕಾರ ಮಾಡಿದ್ದಾರೆ. ಇನ್ನಷ್ಟೇ ಮಾತಾಜಿ ಅವರು ಹೊಸಬರಿಗೆ ಆ ಜವಾಬ್ದಾರಿ ವಹಿಸುವರು. ಸಂಘಟನೆ ಬಲಪಡಿಸಲಾಗುವುದು’ ಎಂದು ಚಿತ್ರದುರ್ಗದ ವಿಜಯಾಂಬಿಕಾ ಮಾತಾಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT