ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಲ್ಕಿ ಪ್ರವಾಹ ಪೀಡಿತ ಪಟ್ಟಿಗೆ ಸೇರ್ಪಡೆ’

Last Updated 3 ಅಕ್ಟೋಬರ್ 2021, 6:11 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ಶನಿವಾರ ಕೇಂದ್ರದ ಸಚಿವ ಭಗವಂತ ಖೂಬಾ ಅವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಭಾತಂಬ್ರಾ ಸೇರಿ ಗಡಿ ಭಾಗದ ಲಖಣಗಾಂವ, ಕಾಕನಾಳ, ಹಲ್ಸಿತೂಗಾಂವ, ಕೊಂಗಳಿ, ಸಾಯಿಗಾಂವ ಸೇರಿದಂತೆ ಮುಂತಾದ ಕಡೆಗಳಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ರೈತರಿಂದ ಮಾಹಿತಿ ಪಡೆದುಕೊಂಡರು.

ಮುಂಗಾರಿನಲ್ಲಿ ರೈತರು ಬೆಳೆದ ಉದ್ದು, ಸೋಯಾ ಅವರೆ, ತೊಗರಿ ಸೇರಿ ಇತರೆ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೀಡಾಗಿವೆ. ಅತಿವೃಷ್ಟಿ ಆದ ಕಾರಣ ತಾಲ್ಲೂಕನ್ನು ಈಗಾಗಲೇ ಪ್ರವಾಹ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಬೆಳೆ ಹಾನಿ ಸಂಭವಿಸಿದ ಯಾವೊಬ್ಬ ರೈತರು ಧೈರ್ಯ ಕಳೆದು ಕೊಳ್ಳಬಾರದು. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬೆನ್ನಿಗೆ ಇದೆ ಎಂದು ಅಭಯ ಅವರು ನೀಡಿದರು.

ವಿಮೆ ಕಂತು ಪಾವತಿಸಿದ ರೈತರು ತಕ್ಷಣ ಬೆಳೆ ಹಾನಿ ವಿವರ ವಿಮೆ ಕಂಪನಿ ಆ್ಯಪ್‍ನಲ್ಲಿ ನೋಂದಾಯಿಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಪರಿಹಾರ ದೊರಕಲಿದೆ ಎಂದರು.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ತ್ವರಿತವಾಗಿ ಬೆಳೆಹಾನಿ ವರದಿ ಸಲ್ಲಿಸಿದರೇ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನ ಮಾಡಲಾಗುವುದು. ವಿಮೆ ಕಂಪನಿ ಸಿಬ್ಬಂದಿ ರೈತರ ಕರೆ ಹಾಗೂ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ದಾಖಲಿಸಿ ಕೊಳ್ಳಬೇಕು ಎಂದು ಸೂಚನೆ ನೀಡಿದರು.

ಬಿಜೆಪಿ ನಾಯಕ ಡಿ.ಕೆ.ಸಿದ್ರಾಮ ಮತ್ತು ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಆದ ಹಿನ್ನೆಲೆಯಲ್ಲಿ ರೈತರು ಬೆಳೆದ ಎಲ್ಲ ಬೆಳೆಗಳು ನಾಶವಾಗಿವೆ ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಎಲ್ಲ ರೈತರಿಗೂ ಸೂಕ್ತ ಪರಿಹಾರ ಕೊಡುವಂತೆ ಕ್ರಮ ವಹಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಶಾಂತವೀರ ಕೇಸ್ಕರ್, ಶಿವರಾಜ ಗಂದಗೆ, ಜನಾರ್ಧನ ಬಿರಾದಾರ, ಪಂಡಿತ ಶಿರೋಳೆ, ತಹಶೀಲ್ದಾರ್ ಕೀರ್ತಿ ಚಾಲಕ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT