ಭಾನುವಾರ, ಅಕ್ಟೋಬರ್ 20, 2019
27 °C
ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಅಭಿಮತ

ಅಜ್ಞಾನ ಹೊಡೆದೊಡಿಸುವ ಜಾನಪದ

Published:
Updated:
Prajavani

ಬೀದರ್‌: ‘ಜಾನಪದದಲ್ಲಿ ಅಧ್ಯಾತ್ಮದ ಶಕ್ತಿ ಇದೆ. ಮನುಷ್ಯನನ್ನು ಪಾರಮಾರ್ಥಿಕ ಲೋಕಕ್ಕೆ ಕೊಂಡೊಯ್ಯುತ್ತದೆ. ಅಜ್ಞಾನವನ್ನು ಹೊಡೆದೊಡಿಸಲೂ ಸಹಕಾರಿಯಾಗಿದೆ’ ಎಂದು ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಲೋಕ ಜಾನಪದ ಸಾಹಿತ್ಯ, ಸಂಸ್ಕೃತಿ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನ ಆಧುನಿಕತೆಗೆ ಮಾರುಹೋಗಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನಪದ ಸಂಸ್ಕೃತಿ ಅಳವಡಿಸಿಕೊಂಡರೆ ನಮ್ಮ ಸಂಬಂಧಗಳು ಮತ್ತೆ ಬೆಸೆಯುತ್ತವೆ. ಜನಪದದಿಂದ ವ್ಯಕ್ತಿಯ ಮನಸ್ಸು ಅರಳುತ್ತದೆ. ಉತ್ಸಾಹ ಮತ್ತು ಲವಲವಿಕೆಯೂ ಹೆಚ್ಚಾಗುತ್ತದೆ’ ಎಂದು ನುಡಿದರು.

ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ,‘ಗ್ರಾಮೀಣ ಜನ ಸಸ್ಯ ಸಂಪತ್ತು ಹಾಗೂ ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಈಗ ಆಧುನೀಕರಣ, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದಿಂದಾಗಿ ಸಂಸ್ಕೃತಿ ಹಾಳಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಅಮರನಾಥ ಸಿಂಗೋಡೆ ಮಾತನಾಡಿ,‘ಇಂದು ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರದ ಮೇಲಿದೆ’ ಎಂದು ಹೇಳಿದರು.

ಕಜಾಪ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಕುಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಜಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಸಂತಾಜಿ, ಸಾಹಿತಿ ವಿ.ಎಂ.ಡಾಕುಳಗೆ, ಮಹಾರುದ್ರ ಡಾಕುಳಗೆ, ನಿವೇದಿತಾ ಹೂಗಾರ, ಶಾಂತಮ್ಮ, ವಿದ್ಯಾವತಿ, ಸಾರಿಕಾ, ಲಕ್ಷ್ಮಣ ಜಾನಪದ ಗಾಯನ ನಡೆಸಿಕೊಟ್ಟರು. ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ನಾಗಮ್ಮ ಭಂಗರಗೆ ನಿರೂಪಿಸಿದರು.

Post Comments (+)