ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಂಭ್ರಮ: ಪ್ರೇಕ್ಷಕರಿಗೆ ಪುಳಕ

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ನೂರಾರು ಕಲಾವಿದರು
Last Updated 28 ಅಕ್ಟೋಬರ್ 2021, 14:29 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ ಕಾರಣ ಒಂದೂವರೆ ವರ್ಷದಿಂದ ಕಳೆಗುಂದಿದ್ದ ಜಿಲ್ಲೆಯ ಕಲಾಕ್ಷೇತ್ರ ಗುರುವಾರ ಮತ್ತೆ ಗರಿಬಿಚ್ಚಿಕೊಂಡಿತು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಗೀತ ಹಾಗೂ ಜಾನಪದ ಕಲಾವಿದರು ತನ್ಮಯತೆಯಿಂದ ಪ್ರದರ್ಶನ ನೀಡಿ ಪ್ರೇಕ್ಷಕರಲ್ಲಿ ಪುಳಕ ಉಂಟು ಮಾಡಿದರು.

ಕಲಾವಿದ ಶಿವಕುಮಾರ ಪಾಂಚಾಳ ಹಾಗೂ ತಂಡ ನಾಡಗೀತೆ, ರೇಣುಕಾ ಮಾಳಿ ಹಾಗೂ ತಂಡ ದೇಶ ಭಕ್ತಿಗೀತೆ, ಶಂಕರ ಚೊಂಡಿ ಹಾಗೂ ತಂಡ ಮೊಹರಂ ಪದ, ಚನ್ನಮ್ಮ ಲಾಧಾ ಹಾಗೂ ತಂಡ ಗೀಗಿ ಪದ, ಸುಶೀಲಮ್ಮ ಚಿಕ್ಕಪೇಟೆ ಹಾಗೂ ತಂಡ, ಪುತಳಾಬಾಯಿ ಹಾಗೂ ತಂಡದವರು ಬುಲಾಯಿ ಪದ ಹಾಡಿದರು.

ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಹಾಗೂ ತಂಡ, ಸುನೀಲ ಕಡ್ಡೆ ಹಾಗೂ ತಂಡ, ಸಂಜೀವಕುಮಾರ ಉಜನಿ ಹಾಗೂ ತಂಡ, ಸಂಗಮೇಶ ಸ್ವಾಮಿ ಹಾಗೂ ತಂಡ, ಮಾರುತಿ ರಾವಗಾಂವೆ ಹಾಗೂ ತಂಡ, ಶಿವಾಜಿ ಮಾನಕರೆ ಹಾಗೂ ತಂಡ, ವೀಣಾ ದೇವದಾಸ ಹಾಗೂ ತಂಡ, ಗೀತಾ ಭೀಮಳಖೇಡ, ವಿಜಯಲಕ್ಷ್ಮಿ ಚಿದ್ರಿ, ಚಿನ್ನಮ್ಮ ಸ್ವಾಮಿ ಚಿಟ್ಟಾ, ಸುಬ್ಬಮ್ಮ ಚಿದ್ರಿ, ಶಕುಂತಲಾ, ಹೇಮಾವತಿ ಹಾಗೂ ತಂಡದವರು ಜಾನಪದ ಗೀತೆ‌ ಹಾಡಿ ಜನಪದ ಲೋಕ ಸೃಷ್ಟಿಸಿದರು.

ಮಧುಕರ ಘೋಡ್ಸೆ ಭಜನೆ, ನವಲಿಂಗ ಪಾಟೀಲ ಹಾಗೂ ತಂಡ, ಮಂಜುನಾಥ ಹಾಗೂ ತಂಡ ಸುಗಮ ಸಂಗೀತ, ಮಲ್ಲಿಕಾರ್ಜುನ ಹಾಗೂ ತಂಡ ವಚನ ಗಾಯನ, ಮಹೇಶ ಮಾಹಿ ಹಾಗೂ ತಂಡ ಕರ್ನಾಟಕ ಸಂಗೀತದ ಮೂಲಕ ಶ್ರೋತೃಗಳ ಮನ ತಣಿಸಿದರು.
ಚಂದ್ರಪ್ಪ ಚಿಕ್ಕಪೇಟೆ ಹಾಗೂ ತಂಡ ಪೈತ್ರಿ ಕುಣಿತ, ರಾಯಚೂರಿನ ಹಗಲು ವೇಷ ತಂಡ, ಆಳಂದದ ಲಂಬಾಣಿ ಕಲಾವಿದರು, ಯಾದಗಿರಿಯ ಡೊಳ್ಳು ಕುಣಿತ ಕಲಾವಿದರು ಅಬ್ಬರದ ಪ್ರದರ್ಶನ ನೀಡಿ ಸಭಿಕರ ಮನ ರಂಜಿಸಿದರು.


ಸಂಸ್ಕೃತಿಯಿಂದಲೇ ದೇಶಕ್ಕೆ ಉಳಿವು


ಬೀದರ್‌: ‘ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ. ಸಂಸ್ಕೃತಿ ನಶಿಸತೊಡಗಿದರೆ ದೇಶಕ್ಕೆ ಅಪಾಯ ಬಂದೊದಗಿದೆ ಎಂದೇ ಅರ್ಥ. ಹೀಗಾಗಿ ಜೀವಂತಿಕೆಯ ಕುರುಹು ಆಗಿರುವ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿಕೊಳ್ಳಬೇಕಾಗದ ಅಗತ್ಯ ಇದೆ’ ಎಂದು ರಂಗಾಯಣದ ಮಾಜಿ ನಿರ್ದೇಶಕ ಮಹೇಶ ಪಾಟೀಲ ಹೇಳಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ಕಲಾವಿದರು ಕಿರಿಯ ಕಲಾವಿದರಿಗೆ ತರಬೇತಿ ನೀಡಿ ಕಲೆಯನ್ನು ಬೆಳೆಸಬೇಕು. ನಾಡಿನ ಕಲೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು’ ಎಂದು ಸಲಹೆ ನೀಡಿದರು.

‘ಕಲಾವಿದ ವಿಜಯಕುಮಾರ ಸೋನಾರೆ ನೇತೃತ್ವದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲೆ, ಸಾಹಿತ್ಯ, ಸಂಗೀತ ಉಳಿಸಿ, ಬೆಳೆಸುವ ದಿಸೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ’ ಎಂದು ಕೊಂಡಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವದೆಲ್ಲೆಡೆ ಇರುವ ಕನ್ನಡಿಗರು ಒಂದೇ ವೇದಿಕೆಯಡಿ ಬರುವಂತೆ ಕನ್ನಡ ಗೀತ ಗಾಯನ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ’ ಎಂದರು.‌

‘ಭಾಷೆ ಉಳಿದರೆ, ಕನ್ನಡ, ಕನ್ನಡಿಗರು ಹಾಗೂ ರಾಜ್ಯ ಉಳಿಯುತ್ತದೆ. ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ದಿಸೆಯಲ್ಲಿ ಕಲಾವಿದರು ಸೇರಿದಂತೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ’ ಎಂದು ಹೇಳಿದರು.

ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ಅನೇಕ ಜನಪದ ಕಲೆಗಳು ಇವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಕಲಾವಿದರು ಇದ್ದಾರೆ. ಇದು ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಹೇಳಿದರು.

ಸಾಹಿತಿ ಎಂ.ಜಿ. ಗಂಗನಪಳ್ಳಿ ಮಾತನಾಡಿ, ‘ಬಹುಭಾಷೆ ಹಾಗೂ ಬಹು ಸಂಸ್ಕೃತಿಯ ಬೀದರ್‌ನಲ್ಲಿ ಸರ್ಕಾರ ಭಾಷಾ ಬಾಂಧವ್ಯದ ಕೇಂದ್ರವನ್ನು ತೆರೆಯಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬೀದರ್ ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ‘ಕಲಾವಿದರಿಗೆ ಪ್ರಮಾಣಪತ್ರ ನೀಡಿ ಮೋಸ ಮಾಡುತ್ತಿರುವ ಅನೇಕ ಸಂಸ್ಥೆಗಳು ಇವೆ. ಇಂತಹ ಸಂಸ್ಥೆಗಳಿಂದ ಕಲಾವಿದರು ಎಚ್ಚರಿಕೆಯಿಂದ ಇರಬೇಕು. ಕಲಾವಿದರು ಕಾರ್ಯಕ್ರಮ ನೀಡುವ ಮುನ್ನ ಸಂಭಾವನೆ ನಗದಿ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಅವರು ಕಲಾವಿದರು ಹಾಗೂ ಕನ್ನಡಿಗರಿಗೆ ಕನ್ನಡ ಭಾಷೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಏಕತಾ ಫೌಂಡೇಷನ್ ಅಧ್ಯಕ್ಷ ರವಿ ಸ್ವಾಮಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಪವಾರ್, ಹಿರಿಯ ಕಲಾವಿದ ರಾಮಲು ಗಾದಗಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿಯ ಸದಸ್ಯೆ ಲಲಿತಾ ಪವಾರ್ ಮತ್ತು ಉದ್ಯಮಿ ಅಮೋಸದಾಸ, ಸುನೀಲ ಭಾವಿಕಟ್ಟಿ, ಶಂಭುಲಿಂಗ ವಾಲ್ದೊಡ್ಡಿ, ಸೂರಜ್‍ಸಿಂಗ್ ರಾಜಪೂತ್, ವೀರಭದ್ರಪ್ಪ ಉಪ್ಪಿನ್, ಎಸ್‌.ವಿ.ಕಲ್ಮಠ, ಅಂಬರೀಷ ಹಸ್ಮಕಲ್, ಯೇಸುದಾಸ ಅಲಿಯಂಬರ್ ಇದ್ದರು.


ಕಲಾ ತಂಡಗಳ ಮೆರವಣಿಗೆ

ಬೆಳಿಗ್ಗೆ ನಗರದ ಕನ್ನಡಾಂಬೆ ವೃತ್ತದಿಂದ ಜಿಲ್ಲಾ ರಂಗ ಮಂದಿರದ ವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಡೊಳ್ಳು, ಹಲಿಗೆ ಬಾರಿಸುತ್ತ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ರಂಗ ಮಂದಿರದ ವರೆಗೆ ಬಂದರು.
2021ನೇ ಸಾಲಿನ ಕನ್ನಡ ರಾಜ್ಯೋತ್ಸವ ನಿಮಿತ್ತ ‘ಕನ್ನಡಕ್ಕಾಗಿ ನಾವೂ ಅಭಿಯಾನ’ ಅಂಗವಾಗಿ ಕುವೆಂಪು, ಕೆ.ಎಸ್. ನಿಸಾರ್ ಅಹ್ಮದ್ ಹಾಗೂ ಹಂಸಲೇಖ ಅವರ ಕನ್ನಡ ಗೀತ ಗಾಯನ ಕಾರ್ಯಕ್ರಮ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT