ಗುರುವಾರ , ಮೇ 6, 2021
26 °C
ಮರ ಬೆಳೆಸಲು ನರೇಗಾ ಅನುದಾನ ಬಳಕೆ

ಹಸಿರು ಹೆಚ್ಚಿಸಲು 1.50 ಲಕ್ಷ ಸಸಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನಲ್ಲಿ ಅರಣ್ಯ ಸಂಪತ್ತು ಹೆಚ್ಚಿಸಲು 1.50 ಲಕ್ಷ ವಿವಿಧ ಪ್ರಕಾರದ ಸಸಿಗಳು ಪೋಷಿಸಲಾಗುತ್ತಿದೆ.

ತಾಲ್ಲೂಕಿನ ಬೋರಾಳ ಬಳಿಯ ಸಾಮಾಜಿಕ ಅರಣ್ಯ ವಿಭಾಗದ ನರ್ಸರಿಯಲ್ಲಿ 1 ಲಕ್ಷ ಹಾಗೂ ಸಂಗಮ ನರ್ಸರಿಯಲ್ಲಿ 50 ಸಾವಿರ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಾಟಿ ಮಾಡಿದ ಈ ಸಸಿಗಳು ಈಗ 3 ರಿಂದ 4 ಅಡಿ ಎತ್ತರಕ್ಕೆ ಬೆಳೆದು ನಿಂತಿವೆ.

ಇಲ್ಲಿಯ ರೈತರು ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆ ಇಟ್ಟ ಪ್ರಯುಕ್ತ 60 ಸಾವಿರ ಶ್ರೀಗಂಧದ ಸಸಿಗಳನ್ನೂ ನಾಟಿ ಮಾಡಿದ್ದಾರೆ. ಉಳಿದಂತೆ 50 ಸಾವಿರ ಹೆಬ್ಬೇವು, 20 ಸಾವಿರ ಕರಿಬೇವು, 10 ಸಾವಿರ ನಿಂಬೆ, 4 ಸಾವಿರ ಮಹಾಗನಿ, 8 ಸಾವಿರ ಸಾಗುವಾನಿ, 6 ಸಾವಿರ ರಕ್ತಚಂದನ, 6 ಸಾವಿರ ಬೇವು ಸೇರಿ ಒಟ್ಟು 1.50 ಲಕ್ಷ ಸಸಿಗಳು ನರ್ಸಿರಿಯಲ್ಲಿ ಹಚ್ಚ ಹಸಿರಿನಿಂದ
ಕಂಗೊಳಿಸುತ್ತಿವೆ.

ನರೇಗಾ ನೆರವು: ‘ನಾವು ಇಷ್ಟೊಂದು ಪ್ರಮಾಣದಲ್ಲಿ ಸಸಿ ಬೆಳೆಸಲು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ನೆರವಿಗೆ ಬಂದಿದೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ಹೇಳುತ್ತಾರೆ.

‘ಔರಾದ್ ಹಾಗೂ ಸಂಗಮ ನರ್ಸರಿಯಲ್ಲಿ ಒಂದು ಸಾವಿರ ಕಾರ್ಮಿಕರಿಗೆ ಕೆಲಸ ಸಿಕ್ಕಿದೆ. ಈಗಲೂ 10 ಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ₹35 ಲಕ್ಷ ಅನುದಾನ ಬಳಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಅವರು ನರೇಗಾ ಯೋಜನೆ ಬಗ್ಗೆ ತುಂಬಾ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

‘ಜನರಿಗೆ ಅರಣ್ಯ ಕೃಷಿ ಬಗ್ಗೆ ತಿಳವಳಿಕೆ ಬಂದಿದೆ. ತಾಲ್ಲೂಕಿನ ಅಕನಾಪುರ ಗ್ರಾಮವೊಂದರಲ್ಲೇ 500 ಎಕರೆ ಪ್ರದೇಶದಲ್ಲಿ ಶ್ರೀಗಂಧ, ಹೆಬ್ಬೇವು ನಾಟಿ ಮಾಡಲಾಗಿದೆ.

ಈ ವರ್ಷ ಮತ್ತೆ 60 ಸಾವಿರ ಶ್ರೀಗಂಧದ ಸಸಿಗಳಿಗೆ ಬೇಡಿಕೆ ಇದೆ. ಈಗಾಗಲೇ ಅಗತ್ಯವಿರುವ ಸಸಿಗಳು ಪೋಷಣೆ ಮಾಡಲಾಗಿದೆ.

ಜೂನ್ ತಿಂಗಳಲ್ಲಿ ಬೇಡಿಕೆ ಸಲ್ಲಿಸಿದ ರೈತರ ಹೊಲಗಳಲ್ಲಿ ಇಲಾಖೆಯಿಂದಲೇ ನಾಟಿ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.