ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಮಾತ್ರ ಶೋಷಣೆಯಿಂದ ಮುಕ್ತಿ: ಸಾಹಿತಿ ಪಾರ್ವತಿ ಸೋನಾರೆ

Last Updated 23 ನವೆಂಬರ್ 2020, 16:51 IST
ಅಕ್ಷರ ಗಾತ್ರ

ಬೀದರ್: ‘ಮಹಿಳೆಯರು ಅತಿಯಾಗಿ ಶೋಷಣೆಗೆ ಒಳಗಾಗಿದ್ದಾರೆ. ಶಿಕ್ಷಣದಿಂದ ಮಾತ್ರ ಶೋಷಣೆಯಿಂದ ಮುಕ್ತಿ ಪಡೆಯಲು ಹಾಗೂ ಪುರುಷರ ಸರಿ ಸಮಾನವಾಗಿ ನಿಲ್ಲಲು ಮಹಿಳೆಯರು ಶಿಕ್ಷಣ ಪಡೆಯಬೇಕು’ ಎಂದು ಸಾಹಿತಿ ಬಿ.ಜೆ. ಪಾರ್ವತಿ ಸೋನಾರೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಇಲ್ಲಿಯ ನಾವದಗೇರಿಯಲ್ಲಿ ನಡೆದ ಮನೆಯಂಗಳದಲ್ಲಿ ಮಾತು 29ನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವಶಾಂತಿಗಾಗಿ ತಥಾಗತ ಮಹಾತ್ಮ ಗೌತಮ ಬುದ್ಧರು ಕ್ರಾಂತಿ ನಡೆಸಿದರೆ, ಸ್ತ್ರೀ ಸಮಾನತೆಗಾಗಿ ವಿಶ್ವಗುರು ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಬಸವಾದಿ ಶರಣರು ಹೋರಾಟ ನಡೆಸಿದರು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕಾನೂನು ರೂಪಿಸಿ ದೇಶದ ಸ್ತ್ರೀಯರಿಗೆ ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದರು’ ಎಂದು ಹೇಳಿದರು.

‘ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಈಗಲೂ ನಡೆದಿವೆ. ಸಂವಿಧಾನ ಬದ್ಧವಾಗಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಮಹಿಳೆಯರು ಸಂಘಟಿತರಾಗಬೇಕು’ ಎಂದರು.

ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ ಮಾತನಾಡಿ, ‘ಬಿ.ಜೆ. ಪಾರ್ವತಿ ಸೋನಾರೆ ಅವರು ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಲ್ಲೊಬ್ಬರಾಗಿ ಗುರುತಿಸಿಕೊಳ್ಳುತ್ತಿರುವುದು ಕಲ್ಯಾಣ ನಾಡಿನ ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ’ ಎಂದರು.

‘ಪ್ರೀತಿ ಇದ್ದಲ್ಲಿ ಯಶಸ್ಸು, ಸಂಪತ್ತು, ಸೌಂದರ್ಯ, ಉಲ್ಲಾಸ ತನ್ನಿಂದ ತಾನೇ ಪ್ರೀತಿಯ ಹಿಂದೆ ಓಡೋಡಿ ಬರುತ್ತವೆ. ಕೋವಿಡ್-19 ಹಿನ್ನಲೆಯಲ್ಲಿ ಬಿ.ಜೆ. ಪಾರ್ವತಿ ವಿಜಯಕುಮಾರ ಸೋನಾರೆ ದಂಪತಿ ಮೇಲಿನ ಪ್ರೀತಿ ಕಾರಣ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಅನೇಕ ಜನರು ಸೇರಿರುವುದು ಇದಕ್ಕೆ ಜೀವಂತ ಸಾಕ್ಷಿಯಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ.ಮಚ್ಛೆ ಮಾತನಾಡಿ, ‘ಬಿ.ಜೆ.ಪಾರ್ವತಿ ಸೋನಾರೆ ಅವರು ತಮ್ಮ ಕವನ, ಲೇಖನ, ಕಥೆ ಹಾಗೂ ಕಾದಂಬರಿಯ ಮೂಲಕ ಮಹಿಳೆಯರ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಿರುವುದು ಸ್ತ್ರೀಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ‘ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳ ಮನೆಗಳಲ್ಲಿ ನಡೆಸಿಕೊಂಡು ಬರುತ್ತಿರುವ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.

ಸಾಹಿತಿ ಮಲ್ಲೇಶ್ವರಿ ಗಂಧಿಗುಡಿ ಸಂವಾದ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಬೀದರ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗೆ ನೇಮಕಗೊಂಡಿರುವ ವಿಜಯಕುಮಾರ ಸೋನಾರೆ ಮತ್ತು ಎಂ.ಪಿ. ಮುದಾಳೆ ಅವರನ್ನು ಸನ್ಮಾನಿಸಲಾಯಿತು.

ಜಾನಪದ ಕಲಾವಿದ ಶಂಕರ ಚೊಂಡಿ ಜಾನಪದ ಗೀತೆ ಹಾಡಿದರು. ಯುವ ಸಾಹಿತಿ ಅಜಿತ್ ನೇಳಗೆ ಸ್ವಾಗತಿಸಿದರು. ವಿದ್ಯಾವಂತಿ ಹಿರೇಮಠ ನಿರೂಪಿಸಿದರು. ವಿದ್ಯಾವತಿ ಬಲ್ಲೂರ ವಂದಿಸಿದರು.

ಶಂಭುಲಿಂಗ ವಾಲ್ದೊಡ್ಡಿ, ರಮೇಶ ಬಿರಾದಾರ, ಸಂಜೀವಕುಮಾರ ಅತಿವಾಳೆ, ಶ್ಯಾಮರಾವ್ ನೆಳವಾಡೆ, ಸುನೀಲ ಭಾವಿಕಟ್ಟಿ, ರಾಮಚಂದ್ರ ಗಣಾಪೂರ, ಸುನೀಲ ಯರಬಾಗ, ಯೇಸುದಾಸ ಅಲಿಯಂಬುರೆ, ಓಂಕಾರ ಪಾಟೀಲ, ವಿಜಯಕುಮಾರ ಸೋನಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT