ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‍ನಿಂದ ‘ಫ್ರೀಡಂ ಫ್ರಂ ಜಂಕ್ ಫುಡ್' ಅಭಿಯಾನ

Last Updated 26 ಜನವರಿ 2022, 12:09 IST
ಅಕ್ಷರ ಗಾತ್ರ

ಬೀದರ್: ಆರೋಗ್ಯಪೂರ್ಣ ಆಹಾರ ಕ್ರಮದ ಕುರಿತು ವಿದ್ಯಾರ್ಥಿಗಳು ಹಾಗೂ ಯುವ ಜನರಲ್ಲಿ ಜಾಗೃತಿ ಮೂಡಿಸಲು ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ‘ಫ್ರೀಡಂ ಫ್ರಂ ಜಂಕ್ ಫುಡ್’ ಅಭಿಯಾನ ಶುರು ಮಾಡಿದೆ.


ಗಣರಾಜ್ಯೋತ್ಸವ ದಿನವಾದ ಬುಧವಾರ ಆನ್‍ಲೈನ್ ಹಾಗೂ ಆಫ್‍ಲೈನ್‍ನಲ್ಲಿ ಆರಂಭಿಸಿರುವ ಅಭಿಯಾನವು ಜನವರಿ 31 ರ ವರೆಗೆ ನಡೆಯಲಿದೆ.


ಅಭಿಯಾನದ ಅಂಗವಾಗಿ ದೇಶದ 13 ರಾಜ್ಯಗಳ ಶಾಹೀನ್ ಶಾಲಾ, ಕಾಲೇಜು ಕ್ಯಾಂಪಸ್‍ಗಳಲ್ಲಿ ಆಫ್‍ಲೈನ್ ಹಾಗೂ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಲ್ಲಿ ಕುರ್‍ಕುರೆ, ಚಿಪ್ಸ್, ಪಿಝ್ಝಾ, ಬರ್ಗರ್ ಮೊದಲಾದ ಜಂಕ್‍ಫುಡ್‍ಗಳ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದ್ದಾರೆ.


ದೇಶ, ವಿದೇಶಗಳ ಪ್ರಸಿದ್ಧ ವೈದ್ಯರು ಪ್ರತಿ ದಿನ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12 ರ ವರೆಗೆ ಶಾಹೀನ್ ಗ್ರುಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಯುಟ್ಯೂಬ್‍ನಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಜೀರ್ಣ, ಮರೆವು, ಬಲಹೀನತೆ ಸೇರಿದಂತೆ ಜಂಕ್‍ಫುಡ್‍ನಿಂದ ಎದುರಾಗುವ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಉತ್ತಮ ಆರೋಗ್ಯಕ್ಕೆ ಅನುಸರಿಸಬೇಕಾದ ಆಹಾರ ಕ್ರಮಗಳ ಕುರಿತು ಮಾಹಿತಿ ಒದಗಿಸಲಿದ್ದಾರೆ ಎಂದು ಹೇಳಿದ್ದಾರೆ.


ಮೊದಲ ದಿನದ ವಿಶೇಷ ಉಪನ್ಯಾಸದಲ್ಲಿ ಹೈದರಾಬಾದ್‍ನ ಕೆಎಆರ್‍ಇ ಸ್ಕೂಲ್‍ನ ಡಾ. ವಾಹೀದ್ ಅನ್ಸಾರಿ ಅವರು, ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯಪೂರ್ಣ ಆಹಾರದ ಮಹತ್ವ ಮನವರಿಕೆ ಮಾಡಿದ್ದಾರೆ. ಯುಎಇಯ ಡಾ. ತೆಹಸಿನ್ ಅಜಝ್‍ಹುಸೇನ್ ಮಲಿಕ್, ಹೈದರಾಬಾದ್‍ನ ಡಾ. ವಿಪಿನ್ ಗೋಯಲ್, ಡಾ. ಬುಶ್ರಾ ಖಾನ್, ಡಾ. ನಾಝನಿನ್ ರಾಣಾ ಹಾಗೂ ಬೀದರ್‍ನ ದಾರುಲ್ ಖೈರ್ ಯುನಾನಿ ಆಸ್ಪತ್ರೆಯ ಡಾ. ಅಖೀಲ್ ಅಹಮ್ಮದ್ ಅವರೂ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.


ಆಹಾರ ಕ್ರಮವು ಉತ್ತಮವಾಗಿದ್ದರೆ ಮಾತ್ರ ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆ ಸಾಧ್ಯವಿದೆ. ಕಾರಣ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.


ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಹಿಂದಿನಿಂದಲೂ ಶಿಕ್ಷಣದ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತ ಬಂದಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT