ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನುದ್ದಕ್ಕೂ ಸ್ನೇಹಿತನ ಮರೆಯಲಾಗದು

Last Updated 1 ಆಗಸ್ಟ್ 2021, 2:19 IST
ಅಕ್ಷರ ಗಾತ್ರ

ಬೀದರ್: ಕೋವಿಡ್‌ ಬಂದ 10 ದಿನಗಳು ನಮ್ಮ ಕುಟುಂಬದ ಪಾಲಿಗೆ ಕರಾಳ ದಿನಗಳು. ಸೋಂಕು ತಗುಲಿದ ಸುದ್ದಿ ತಿಳಿದ ತಕ್ಷಣ ನೆಂಟರು ಮೌನಕ್ಕೆ ಜಾರಿದರು. ನೆರೆ ಹೊರೆಯವರು, ನಮ್ಮಿಂದ ಸಹಾಯ ಪಡೆದವರೂ ಅಂತರ ಕಾಯ್ದುಕೊಂಡರು. ಕೋವಿಡ್‌ ಬಗೆಗಿನ ಭಯ ನಮ್ಮನ್ನು ಸಮುದಾಯದಿಂದ ದೂರ ಮಾಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭರವಸೆಯ ಬೆಳಕು ಮೂಡಿಸಿದವರು ನನ್ನ ಆತ್ಮೀಯ ಗೆಳೆಯ ಜಿಲ್ಲಾ ಪ್ರಯೋಗ ಶಾಲೆ ನೋಡೆಲ್‌ ತಂತ್ರಜ್ಞ ರಾಜು ಕುಲಕರ್ಣಿ. ಬದುಕಿನುದ್ದಕ್ಕೂ ಅವರನ್ನು ಮರೆಯಲಾಗದು.

ಆರೋಗ್ಯ ಇಲಾಖೆಯಲ್ಲಿಯೇ ಇರುವ ಕಾರಣ ಕೋವಿಡ್‌ ಬಗ್ಗೆ ನನಗೆ ಗೊತ್ತಿತ್ತು. ನಾನು ಒಂದು ಸರ್ಜರಿ ಮಾಡಿಸಿಕೊಂಡಿರುವ ಕಾರಣ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೆ. ಒಂದು ದಿನ ಕೋವಿಡ್‌ ಪರೀಕ್ಷೆ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿತು. ನನ್ನ ಸಂಪರ್ಕಕ್ಕೆ ಬಂದ ಪತ್ನಿ ಹಾಗೂ ಪುತ್ರನಿಗೂ ಕೋವಿಡ್ ತಗುಲಿತ್ತು. ಆದರೆ, ಯಾರಿಗೂ ಲಕ್ಷಣಗಳೇ ಇರಲಿಲ್ಲ. ಬ್ರಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿದಾಗ ಅವರು ನಮ್ಮನ್ನು ಆಂಬುಲನ್ಸ್‌ನಲ್ಲಿ ಕರೆದೊಯ್ದು ರಾತ್ರಿ ಕೋವಿಡ್‌ ವಾರ್ಡ್‌ನಲ್ಲಿ ದಾಖಲಿಸಿದರು. ಬರಿಗೈಯಲ್ಲಿ ಬಂದಿದ್ದ ನಮಗೆ ಬೆಳಿಗ್ಗೆ ಏನು ಮಾಡಬೇಕು ತಿಳಿಯಲಿಲ್ಲ.

ಗೆಳೆಯ ರಾಜು ಕುಲಕರ್ಣಿ ಅವರಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ಕೋವಿಡ್ ತಗುಲಿರುವುದನ್ನು ತಿಳಿಸಿದೆ. ಅವರು ಮೊದಲು ನನಗೆ ಎಲ್ಲರಂತೆ ಸಹಜವಾಗಿ ಸಮಾಧಾನ ಹೇಳಿದರು. ನಂತರ ಒಂದು ಬಿಸಿ ನೀರಿನ ಕಿಟಲ್ ಹಾಗೂ ಸ್ಟೀಮರ್ ಖರೀದಿಸಿಕೊಂಡು ನೇರವಾಗಿ ಕೋವಿಡ್‌ ವಾರ್ಡ್‌ಗೆ ಬಂದರು. ನಾನು ನೀವು ವಾರ್ಡ್‌ನೊಳಗೆ ಬರಬಾರದಿತ್ತು ಎಂದು ಅವರಿಗೆ ನಯವಾಗಿಯೇ ಹೇಳಿದೆ. ಆದರೆ, ಅವರು ‘ಸುರಕ್ಷತಾ ಕ್ರಮ ಅನುಸರಿಸಿ ಬಂದಿದ್ದೇನೆ. ಕೋವಿಡ್‌ ಬರುವುದೇ ಆದರೆ ಹೇಗೂ ಬರುತ್ತೇ ಬಿಡಿ’ ಎಂದು ಹೇಳಿ ಕೆಲ ಕ್ಷಣ ನನ್ನೊಂದಿಗೆ ಕಳೆದು ಧೈರ್ಯ ತುಂಬಿದರು. ಗೆಳೆತನಕ್ಕಾಗಿ ಸೋಂಕನ್ನೂ ಲೆಕ್ಕಿಸದೆ ನನ್ನನ್ನು ಭೇಟಿಯಾಗಲು ಬಂದಿದ್ದನ್ನು ನೋಡಿ ನನ್ನ ಕಣ್ಣಂಚಿನಿಂದ ಹನಿಗಳು ಉದುರಿದವು.

ನಾನು ಆಸ್ಪತ್ರೆಯಿಂದ ಮನೆಗೆ ಬರುವ ಮೊದಲೇ ರಾಜು ಕುಲಕರ್ಣಿ ಅವರು ಬೀದರ್‌ನ ಗುಂಪಾದಲ್ಲಿರುವ ನಮ್ಮ ಮನೆಯ ಸುತ್ತಲಿನ ಪ್ರದೇಶವನ್ನು ಸ್ಯಾನಿಟೈಸ್‌ ಮಾಡಿಸಿದ್ದರು. ಎಂಟು ದಿನಗಳ ವರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಪತ್ನಿ, ಪುತ್ರನೊಂದಿಗೆ ಮನೆಗೆ ಬಂದೆ. ಕಾಲೊನಿ ಜನರಲ್ಲಿನ ಭಯ ಹೋಗಿರಲಿಲ್ಲ.

ಕೆಲವು ಗೆಳೆಯರು ಹತ್ತಿರಕ್ಕೆ ಬಾರದಿದ್ದರೂ ಹಣಕಾಸಿನ ಸಹಾಯ ಒದಗಿಸಲು ಮುಂದೆ ಬಂದರು. ಕೆಲವರು ದೂರದಿಂದಲೇ ಸಹಾಯ ಮಾಡಲು ಯತ್ನಿಸಿದರು. ಆದರೆ, ರಾಜು ಕುಲಕರ್ಣಿ ಅವರ ಆತ್ಮೀಯತೆ ಎಲ್ಲಕ್ಕಿಂತಲೂ ಶ್ರೇಷ್ಠವಾಗಿತ್ತು. ಮಾನವೀಯತೆಯನ್ನೊಳಗೊಂಡ ಅವರ ಗೆಳೆಯತನ ಮರೆಯಲಾಗದು.

ಮಲ್ಲಿಕಾರ್ಜುನ ಸದಾಶಿವ
ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT