ಗುರುವಾರ , ನವೆಂಬರ್ 21, 2019
22 °C
ಚಪ್ಪಲಿ ಹಾಕಿಕೊಂಡೇ ಒಳಹೋದ ಕಾರ್ಯಕರ್ತರು!

ಐಸಿಯು ಒಳಗೇ ತೆರಳಿ ಹಣ್ಣು ವಿತರಿಸಿದ ಸಚಿವ

Published:
Updated:
Prajavani

ಬೀದರ್‌: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಂಗಳವಾರ ಇಲ್ಲಿಯ ಬ್ರಿಮ್ಸ್‌ ಬೋಧಕ ಆಸ್ಪತ್ರೆಯ ‘ತೀವ್ರ ನಿಗಾ ಘಟಕ’ದ ಒಳಗೇ ತೆರಳಿ ರೋಗಿಗಳಿಗೆ ಹಣ್ಣು ವಿತರಿಸಿದರು. ಬಿಜೆಪಿ ಕಾರ್ಯಕರ್ತರು ಚಪ್ಪಲಿ ಧರಿಸಿಯೇ ಐಸಿಯು ಪ್ರವೇಶಿಸಿದ್ದು ರೋಗಿಗಳ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಯಿತು.

ಸಚಿವರು, ಸಂಸದ–ಶಾಸಕರು ತಮ್ಮ ಪಾದರಕ್ಷೆಗಳನ್ನು ಐಸಿಯು ಹೊರಗೆ ಬಿಟ್ಟು ಒಳಗಡೆ ಇದ್ದ ಸ್ಲಿಪರ್‌ ಹಾಕಿಕೊಂಡು ರೋಗಿಗಳ ಕ್ಷೇಮ ವಿಚಾರಿಸಿದರು.

ಆದರೆ ಚವಾಣ್‌ ಬೆಂಬಲಿಗರು ಚಪ್ಪಲಿ ಹಾಕಿಕೊಂಡೇ ಐಸಿಯು ಒಳಗೆ ನುಗ್ಗಿದರು. ಆಸ್ಪತ್ರೆಯ ಸಿಬ್ಬಂದಿ ಮನವಿ ಮಾಡಿದರೂ ಕಿವಿಕೊಡಲಿಲ್ಲ. ಹೀಗಾಗಿ ಅಲ್ಲಿಂದ ಹೊರಗೆ ಹೋಗುವಂತೆ ರೋಗಿಗಳ ಸಂಬಂಧಿಕರೇ ಕಾರ್ಯಕರ್ತರಿಗೆ ಹೇಳಿದರು. ಐಸಿಯುನಲ್ಲಿ ಗದ್ದಲ ಶುರುವಾದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯಕುಮಾರ ಅಂತಪ್ಪನವರ್‌, ಕಾರ್ಯಕರ್ತರಿಗೆ ಹೊರಗೆ ಕಳಿಸಿದರು.

ಸಚಿವರು ಅಪ್ರಾನ್‌ ಹಾಗೂ ಕೈಗವಸು ಧರಿಸದೇ ಐಸಿಯುಗೆ ಬಂದಿದ್ದರಿಂದ ವೈದ್ಯಕೀಯ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು. ನಿಯಮ ಪಾಲನೆಯಾಗದಿರುವುದು ಮನವರಿಕೆಯಾದ ನಂತರ ಸಚಿವರು ಒಳರೋಗಿಗಳ ವಿಭಾಗಕ್ಕೆ ತೆರಳಿ, ಮಲಗಿದ್ದ ರೋಗಿಗಳನ್ನು ಎಬ್ಬಿಸಿ ಸೇಬು, ಬಾಳೆಹಣ್ಣು ಹಾಗೂ ಬಿಸ್ಕತ್ ವಿತರಿಸಿದರು!

ಪ್ರತಿಕ್ರಿಯಿಸಿ (+)