ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ಉತ್ಸವದಲ್ಲಿ ಕಲೆಯ ಅನಾವರಣ

ಸಾಂಸ್ಕೃತಿಕ ಸಂಬಂಧ ಬೆಸೆದ ಜನಪದ ಕಲಾವಿದರು
Last Updated 2 ನವೆಂಬರ್ 2019, 15:26 IST
ಅಕ್ಷರ ಗಾತ್ರ

ಜನವಾಡ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೀದರ್‌ ಜನಪದ ಕಲಾವಿದರ ಬಳಗದ ವತಿಯಿಂದ ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಶನಿವಾರ ನಡೆದ ಜನಪದ ಗಡಿನಾಡು ಉತ್ಸವವು ಜನಪದ ಕಲೆಗಳ ಅನಾವರಣಕ್ಕೆ ವೇದಿಕೆ ಒದಗಿಸಿತು.

ಗ್ರಾಮೀಣ ಕಲಾವಿದರು ಡೊಳ್ಳುಕುಣಿತ, ಮುಖವಾಡ, ಹಗಲುವೇಷ ಸೇರಿದಂತೆ ವೈವಿಧ್ಯಮಯ ಪ್ರದರ್ಶನದ ಮೂಲಕ ಕಲೆಯ ಅನಾವರಣಗೊಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಜನಪದ ಕಲೆಯನ್ನು ಕಣ್ತುಂಬಿಕೊಂಡರು.
ಬಾಲರಾಜ್, ಡೇವಿಡ್ ನರಸಪ್ಪ ಹಾಗೂ ಸಂಗಡಿಗರು ಚರ್ಮವಾದ್ಯ, ಸಂತೋಷ ಹಾಗೂ ಸಂಗಡಿಗರು ಡೊಳ್ಳು ಕುಣಿತ, ಕಮಲಮ್ಮ ಹಾಗೂ ಸಂಗಡಿಗರು ಚರ್ಮವಾದ್ಯ, ನಿಂಗಮ್ಮ ಹಾಗೂ ಸಂಗಡಿಗರು ಕೋಲಾಟ, ಅಜಯ ಯೇಸುದಾಸ ಹಾಗೂ ಸಂಗಡಿಗರು ಮುಖವಾಡ, ಅಂಬರೀಷ ಹಾಗೂ ಸಂಗಡಿಗರು ಹಗಲು ವೇಷ, ರಾಮಚಂದ್ರ ತೋರಣಾವಾಡಿ, ಶಿವರಾಜ, ನಿರ್ಮಲಾಬಾಯಿ ತೋರಣಾವಾಡಿ ಸಂಗಡಿಗರು ಕೋಲಾಟ, ನಿರ್ಮಲಾಬಾಯಿ ತೋರಣಾವಾಡಿ ಶಿವ ಭಜನ, ಶಿವರಾಜ್ ಪಾಟೀಲ ಮುಧೋಳ(ಬಿ)ತಂಡ ರಾಮ, ಲಕ್ಷ್ಮಣರ ಕೋಲಾಟ, ವಿಜಯಲಕ್ಷ್ಮಿ ಚಿದ್ರಿ ಹಾಗೂ ಸಂಗಡಿಗರು ಚಕ್ರಿ ಭಜನೆ, ಲಲಿತಾ ಸಂಗಡಿಗರು ಪ್ರದರ್ಶಿಸಿದ ಲಂಬಾಣಿ ನೃತ್ಯ ಜನ ಮನ ಸೆಳೆಯಿತು.

ನವಲಿಂಗ ಪಾಟೀಲ ಜನಪದ ಗೀತೆ, ಸುನೀಲ ಕಡ್ಡೆ ಸುಗಮ ಸಂಗೀತ, ದಿಲೀಪ ಕಾಡವಾದ ಜಾನಪದ ಗೀತೆ, ಶಿವಲಿಂಗ ತತ್ವಪದ, ಶಿವಾಜಿ ಮಾನಕರೆ ಜಾನಪದ ಗೀತೆ, ವೀಣಾ ಚಿಮಕೋಡ ಹಾಗೂ ಸಂಗಡಿಗರು ಜಾನಪದ ಗಾಯನ, ಸುದೀಪ ಚಾಂಬೋಳ ಪೈತ್ರಿಕುಣಿತ, ಪಾಂಡುರಂಗ ತತ್ವಪದ, ಅನಿಲ ಚಿಟ್ಟಾ ಅವರು ಜಾನಪದ ಗೀತೆಗಳನ್ನು ಹಾಡಿದರು. ಶಿವಕುಮಾರ ಪಾಂಚಾಳ ನಾಡಗೀತೆ ಹಾಡಿದರು.

ಸಾಂಸ್ಕೃತಿಕ ಸಂಬಂಧ ಬೆಸೆದ ಉತ್ಸವ:
‘ಬೀದರ್‌ ಗಡಿಯಲ್ಲಿ ನಡೆದ ಉತ್ಸವದಲ್ಲಿ ಕನ್ನಡ ಹಾಗೂ ತೆಲುಗು ಕಲಾವಿದರು ಜಂಟಿಯಾಗಿ ಪ್ರದರ್ಶನ ನೀಡುವ ಮೂಲಕ ಎರಡು ರಾಜ್ಯಗಳ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬೆಸೆದಿದ್ದಾರೆ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ಬಣ್ಣಿಸಿದರು.
ಜನಪದ ಗಡಿನಾಡು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯಬೇಕು. ಇದರಿಂದ ಭ್ರಾತೃತ್ವ ಭಾವನೆ ಜಾಗೃತಗೊಳ್ಳುತ್ತದೆ’ ಎಂದರು.

ಶಾಸಕ ರಹೀಂ ಖಾನ್ ಮಾತನಾಡಿ,‘ಗಡಿ ಪ್ರದೇಶದಲ್ಲಿ ಜನಪದ ಉತ್ಸವದಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಕನ್ನಡ ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ‘ಜನಪದ ಗಡಿನಾಡು ಉತ್ಸವ ಜನರ ಉತ್ಸವವಾಗಬೇಕು. ಕಲಾವಿದರನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ನೆರವಾಗುತ್ತವೆ’ ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ವಿಶ್ವದಲ್ಲೇ ಭಾರತ ಅತ್ಯಂತ ಭವ್ಯ ರಾಷ್ಟ್ರವಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ರೀತಿಯ ಭಾಷೆಯನ್ನು ಆಡುವ ಜನರಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುವ ದೇಶ ನಮ್ಮದಾಗಿದೆ. ಹಲವಾರು ಭಾಷಿಕರನ್ನು ಹೊಂದಿರುವ ಬೀದರ್‌ ಜಿಲ್ಲೆಯ ಸಂಸ್ಕೃತಿ ಕೂಡ ವಿಶಿಷ್ಟವಾಗಿದೆ’ ಎಂದು ಹೇಳಿದರು.

‘ನಮ್ಮ ಪೂರ್ವಜರು ನಾಟಕ, ಬುಲಾಯಿ ಪದ, ಸೋಬಾನೆ ಪದ ಹೀಗೆ ಜನಪದ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದರೆ ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಲ್ಯಾಪ್‌ಟಾಪ್, ಮೊಬೈಲ್‌ಗೆ ಅಂಟಿಕೊಂಡಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
ತೆಲಂಗಾಣದ ಶಾಸಕ ಭೋಪಾಲರೆಡ್ಡಿ ಮಾತನಾಡಿ, ‘ಸ್ವಾತಂತ್ರ್ಯದ ನಂತರವೂ ಬೀದರ್‌ ಹಾಗೂ ನಾರಾಯಣಖೇಡ ಕರ್ನಾಟಕದ ಲೋಕಸಭಾ ಕ್ಷೇತ್ರವಾಗಿದ್ದವು. ಮುಂದೆ ಆದ ರಾಜ್ಯ ವಿಭಜನೆಯ ನಂತರ ನಾರಾಯಣಖೇಡ ತೆಲಂಗಾಣಕ್ಕೆ ಸೇರಿಕೊಂಡಿತು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ ಪಾಟೀಲ ಗಾದಗಿ, ಬೀದರ್‌ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮಲು ಬರೂರ, ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಮಾಣಿಕ, ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ ಭಾಗವಹಿಸಿದ್ದರು.

ದುಬೈನ ಜೆವೆಲ್ ಆಫ್‌ ಇಂಡಿಯಾ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಹಿಪ್ಪಳಗಾಂವ್‌, ಮನ್ನಾನ್ ಸೇಠ್, ಜಾನಪದ ಅಕಾಡೆಮಿ ಸದಸ್ಯ ರಾಜೇಂದ್ರ ಯರನಾಳೆ, ಕಲಾವಿದ ಸಂಗ್ರಾಮ ಪಾಟೀಲ, ಭಗತಸಿಂಗ್ ಬ್ರಿಗೇಡ್ ಅಧ್ಯಕ್ಷ ಜಸ್‌ಪ್ರೀತ್‌ ಸಿಂಗ್ ಮೊಂಟಿ ಅವರನ್ನು ಸನ್ಮಾನಿಸಲಾಯಿತು.

ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮೆರವಣಿಗೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT