ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ನಾಯಕರ ಅವಮಾನಿಸಿದ್ದ ಗಾಂಧಿ ಕುಟುಂಬ: ಅಮಿತ್ ಶಾ

ಬಸವಕಲ್ಯಾಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ
Last Updated 4 ಮಾರ್ಚ್ 2023, 5:30 IST
ಅಕ್ಷರ ಗಾತ್ರ

ಬೀದರ್: ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಸವಕಲ್ಯಾಣ
ದಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡುವ ಮೂಲಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌, ಜೆಡಿಎಸ್‌ ಎರಡೂ ವಂಶಾಡಳಿತ ಪಕ್ಷಗಳು. ಜೆಡಿಎಸ್‌ಗೆ ಚುನಾವಣೆಯಲ್ಲಿ 50 ಸೀಟು ಸಿಕ್ಕರೂ ಸಾಕು ಅದು ಮತ್ತೆ ಕಾಂಗ್ರೆಸ್‌ ಜೊತೆ ಸೇರುತ್ತದೆ. ಕಾಂಗ್ರೆಸ್ ತುಕಡೆ ತುಕಡೆ ಗ್ಯಾಂಗ್‌ಗಳನ್ನು ಒಗ್ಗೂಡಿಸುತ್ತದೆ’ ಎಂದು ವ್ಯಂಗ್ಯವಾಡಿದರು.‌

‘ರಾಣಿ ಅಬ್ಬಕ್ಕ, ಮದಕರಿ ನಾಯಕ, ಕೆಂಪೇಗೌಡರ ನಾಡಿನಲ್ಲಿ ಉಗ್ರ
ವಾದಿಗಳನ್ನು ಬೆಂಬಲಿಸುವ ಕಾಂಗ್ರೆಸ್‌ ಕೂಡ ಇದೆ. ಇಂದಿರಾ ಗಾಂಧಿ ಅವರು ನಿಜಲಿಂಗಪ್ಪಗೆ ಮತ್ತು ರಾಜೀವ್ ಗಾಂಧಿ ಅವರು ವೀರೇಂದ್ರ
ಪಾಟೀಲಗೆ ಅವಮಾನಿಸಿದ್ದರು. ಈಗ ರಾಹುಲ್‌ ಪ್ರಧಾನಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಸೇರಿ ಕಾಂಗ್ರೆಸ್‌ನಲ್ಲಿ 10 ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಇಂತವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ, ಕಾಶಿ, ಸೋಮನಾಥ, ಭದ್ರಿನಾಥ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ಇಲ್ಲಿ ಅನುಭವ ಮಂಟಪದ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಸಾಂಸ್ಕೃತಿಕ ಪರಂಪರೆ ಮುಂದುವರಿಸುವ ಕೆಲಸ ಬಿಜೆಪಿ ಮಾಡುತ್ತಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸಚಿವರಾದ ಶಂಕರ‍ ಪಾಟೀಲ ಮುನೇನಕೊಪ್ಪ, ಬಿ.ಶ್ರೀರಾಮುಲು, ಶಾಸಕ ಜಗದೀಶ ಶೆಟ್ಟರ್ ಇದ್ದರು.

ಇದಕ್ಕೂ ಮುನ್ನ ಅಮಿತ್ ಶಾ ಅವರು ಬೀದರ್‌ನಲ್ಲಿ ಗುರುದ್ವಾರಕ್ಕೆ ಮತ್ತು ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಭೇಟಿ ನೀಡಿದರು.

ಬಿಎಸ್‌ವೈ, ಶಾ ವಿರುದ್ಧ ರೈತರ ಆಕ್ರೋಶ

ಹುಮನಾಬಾದ್‌ (ಬೀದರ್‌ ಜಿಲ್ಲೆ): ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ಶಾಸಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರೋಡ್‌ ಶೋ ನಡೆಯುತ್ತಿದ್ದ ವೇಳೆ ರೈತ ಸಂಘದ ಮುಖಂಡರು ‘ರಾಜ್ಯ ಸರ್ಕಾರ, ಸುಳ್ಳು ಭರವಸೆ ಕೊಟ್ಟ ಯಡಿಯೂರಪ್ಪಗೆ ಧಿಕ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2018ರಲ್ಲಿ ಹುಮನಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಅಮಿತ್ ಶಾ ಅವರು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT