ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಏಕದಂತನಿಗೆ ಭಕ್ತಿ, ಶ್ರದ್ಧೆಯ ವಿದಾಯ

ಸುಲ್ತಾನಪುರ ಕ್ವಾರಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ
Last Updated 15 ಸೆಪ್ಟೆಂಬರ್ 2021, 4:26 IST
ಅಕ್ಷರ ಗಾತ್ರ

ಬೀದರ್: ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮಂಗಳವಾರ ಶ್ರದ್ಧೆ, ಭಕ್ತಿಯೊಂದಿಗೆ ವಿಸರ್ಜಿಸಲಾಯಿತು.

ಕೋವಿಡ್ ಸೋಂಕಿನ ಕಾರಣ ಈ ಬಾರಿ ಡಿಜೆ, ಮೆರವಣಿಗೆಗೆ ಅವಕಾಶ ಇರಲಿಲ್ಲ. ಹೀಗಾಗಿ ವಿಸರ್ಜನೆ ಸರಳವಾಗಿ ನಡೆಯಿತು.

ನಗರದ ವಿವಿಧ ಗಣೇಶ ಮಂಡಳಗಳ ಪದಾಧಿಕಾರಿಗಳು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಆಟೊ ಟ್ರ್ಯಾಲಿ, ಟೆಂಪೊ, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಒಯ್ದು ತಾಲ್ಲೂಕಿನ ಸುಲ್ತಾನಪುರದಲ್ಲಿ ಇರುವ ಉದ್ಯಮಿ ಗುರುನಾಥ ಕೊಳ್ಳೂರ ಅವರ ಕ್ವಾರಿಯಲ್ಲಿ ವಿಸರ್ಜಿಸಿದರು.

ಗಣೇಶ ಮಹಾ ಮಂಡಳ ಪದಾಧಿಕಾರಿಗಳು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು. ಸಣ್ಣ ಮೂರ್ತಿಗಳನ್ನು ಆಯಾ ಗಣೇಶ ಮಂಡಳಗಳ ಪದಾಧಿಕಾರಿಗಳು ವಿಸರ್ಜಿಸಿದರೆ, ದೊಡ್ಡ ಗಾತ್ರದ ಮೂರ್ತಿಗಳನ್ನು ಕ್ರೇನ್ ನೆರವಿನಿಂದ ವಿಸರ್ಜನೆ ಮಾಡಲಾಯಿತು.

ಕ್ವಾರಿ ಬಳಿ ಗಣೇಶ ಮಂಡಳಗಳ ಪದಾಧಿಕಾರಿಗಳಿಗಾಗಿ ಟೆಂಟ್ ಹಾಕಲಾಗಿತ್ತು. ಮಹಾ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಗಣೇಶ ಮಹಾ ಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಮುಖಂಡರಾದ ಸೂರ್ಯಕಾಂತ ಶೆಟಕಾರ, ವಿಕ್ರಮ ಮುದಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಸಿಪಿಐ ಶ್ರೀಕಾಂತ ಅಲ್ಲಾಪುರ, ಹಣಮಂತ ಬುಳ್ಳಾ, ಅಶೋಕ ದಿಡಗೆ, ನರೇಶ ಗೌಳಿ ಮೊದಲಾದವರು ಇದ್ದರು.

ಬೆಳಿಗ್ಗೆಯಿಂದಲೇ ಸಿದ್ಧತೆ: ಮೂರ್ತಿ ವಿಸರ್ಜನೆಗೆ ಗಣೇಶ ಮಂಡಳ ಪದಾಧಿಕಾರಿಗಳು ಬೆಳಿಗ್ಗೆಯಿಂದಲೇ ತಯಾರಿಯಲ್ಲಿ ತೊಡಗಿದರು. ಮಂಟಪಗಳನ್ನು ತೆರವುಗೊಳಿಸಿದರು. ಬೆನಕನಿಗೆ ಪೂಜೆ ಸಲ್ಲಿಸಿ, ವಾಹನಗಳಲ್ಲಿ ಇಟ್ಟರು. ಮಧ್ಯಾಹ್ನ ವೇಳೆಗೆ ವಾಹನಗಳು ಸುಲ್ತಾನಪುರದತ್ತ ಮುಖ ಮಾಡಿದವು.

ನಗರದ ವಿವಿಧೆಡೆ ಚಿಣ್ಣರು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಚಿಕ್ಕ ಮೂರ್ತಿಗಳನ್ನು ಗಣೇಶ ಮಂಡಳಗಳ ಮಂಟಪಗಳಲ್ಲಿ ತಂದು ಇಡಲಾಯಿತು. ಮಂಡಳಿಗಳ ಪದಾಧಿಕಾರಿಗಳು ತಮ್ಮ ಮೂರ್ತಿಗಳ ಜತೆ ಅವುಗಳನ್ನೂ ವಾಹನಗಳಲ್ಲಿ ವಿಸರ್ಜನೆಗಾಗಿ ಒಯ್ದರು.

ಕೋವಿಡ್ ಪ್ರಯುಕ್ತ ಎಂದಿನ ಸಂಭ್ರಮ ಇರಲಿಲ್ಲ. ಕೊನೆಯ ದಿನ ಅನೇಕರು ಮಕ್ಕಳೊಂದಿಗೆ ನಗರದ ವಿವಿಧೆಡೆಯ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆ ಮಾಡಿದರು.

ನಗರದ 151 ಕಡೆಗಳಲ್ಲಿ ಲಂಬೋದರನ ವಿವಿಧ ಭಂಗಿಯ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿತ್ತು. ಗಣೇಶ ಮಂಡಳಿಗಳ ಪದಾಧಿಕಾರಿಗಳು ಅಲಂಕೃತ ಮಂಟಪ ಗಳಲ್ಲಿ ಐದು ದಿನ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT