ಶುಕ್ರವಾರ, ಆಗಸ್ಟ್ 19, 2022
25 °C
ಪೊಲೀಸರ ನಾಲ್ಕು ತಂಡಗಳಿಂದ 15 ಗ್ರಾಮಗಳಲ್ಲಿ ಶೋಧ

ಗಡಿಯಲ್ಲಿ ಗಾಂಜಾ ಪತ್ತೆ ಕಾರ್ಯ ತೀವ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ‌ ಪ್ರಮಾಣದಲ್ಲಿ ಗಾಂಜಾ ದೊರೆತ ಪ್ರಯುಕ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌ ನೇತೃತ್ವದಲ್ಲಿ ಪೊಲೀಸರು ಭಾನುವಾರ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಔರಾದ್‌ ತಾಲ್ಲೂಕಿನ 15 ತಾಂಡಾಗಳಿಗೆ ತೆರಳಿ ತೀವ್ರ ಶೋಧ ಕಾರ್ಯ ನಡೆಸಿದರು.

ಗಡಿಗೆ ಹೊಂದಿಕೊಂಡಿರುವ ಜಮಗಿ, ಬಾರ್ಡರ್ ತಾಂಡಾ, ಘಾಮಾ ತಾಂಡಾ, ಹೊಲಗಳಲ್ಲಿರುವ ಕುರಿ ಸಾಕಾಣಿಕೆ ಘಟಕ, ಹಾಲು ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದರು. ಹೊಲಗಳ ಬೆಳೆಯ ಮಧ್ಯೆ ಗಾಂಜಾ ಬೆಳೆಯಲಾಗಿದೆಯೇ ಎನ್ನುವುದನ್ನು ಪರಿಶೀಲಿಸಿದರು.

ಗಾಂಜಾ ಪ್ರಕರಣದ ಆರೋಪಿ ಜಮಗಿ ತಾಂಡಾದ ನಾಗನಾಥ ಅವರ ಮನೆಗೂ ಭೇಟಿ ಕೊಟ್ಟು ಶೋಧ ಕಾರ್ಯ ನಡೆಸಿದರು. ಮನೆಗಳ ನೆಲ ಮಾಳಿಗೆಯಲ್ಲಿನ ನೀರಿನ ಟ್ಯಾಂಕ್‌, ಮನೆಯೊಳಗಿನ ಅಟ್ಟ, ಬಣಿವೆ, ಕೊಟ್ಟಿಗೆ, ಹಾಲಿನ ಕ್ಯಾನ್‌ ಸೇರಿದಂತೆ ಶಂಕೆ ಅನಿಸಿದ ಪ್ರತಿಯೊಂದು ಸ್ಥಳವನ್ನೂ ವೀಕ್ಷಿಸಿದರು.

‘ನಾಗನಾಥ ಇದಕ್ಕೂ ಮೊದಲು ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಪೊಲೀಸರು ಹಲವು ಬಾರಿ ಅವನನ್ನು ಬಂಧಿಸಿದ್ದರು. ನಂತರ ಗಾಂಜಾ ಮಾರಾಟ ಶುರು ಮಾಡಿದ್ದ. ಗಾಂಜಾ ಬೆಳೆದ ವ್ಯಕ್ತಿಗಳು ಹಾಗೂ ಗಾಂಜಾ ಕೊಳ್ಳಲು ಬರುತ್ತಿದ್ದವರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಜಮಗಿ ಗ್ರಾಮದಲ್ಲಿ ಒಂದು ಪೊಲೀಸ್‌ ವಾಹನವನ್ನು ನಿಯೋಜಿಸಿದ್ದಾರೆ.

ಗಾಂಜಾ ಮಾರಾಟ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮನೆ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ತನಿಖೆ ಮುಂದುವರಿದಿರುವ ಕಾರಣ ಪೊಲೀಸರು ಮಾಹಿತಿ ಬಿಟ್ಟುಕೊಡುತ್ತಿಲ್ಲ. ದಾಳಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌, ಔರಾದ್‌ ಸಿಪಿಐ, ಪಿಎಸ್ಐ, ಪೊಲೀಸ್‌ ನಿಗ್ರಹ ದಳ, ಶ್ವಾನದಳ ಹಾಗೂ ಅಪರಾಧ ವಿಭಾಗದ ಪೊಲೀಸರು, ಸಂತಪುರ ಹಾಗೂ ಚಿಂತಾಕಿ ಠಾಣೆಯ ಪೊಲೀಸರು ಪಾಲ್ಗೊಂಡಿದ್ದರು.

ಬೀದರ್‌ ನಗರದ ಇರಾನಿಗಲ್ಲಿ ಹಾಗೂ ಹುಮನಾಬಾದ್‌ ಪಟ್ಟಣದಲ್ಲೂ ಪೊಲೀಸರು ವಿವಿಧೆಡೆ ದಾಳಿ ನಡೆಸಿ ಮಾದಕ ವಸ್ತಗಳು ಮಾರಾಟಗಾರರ ಮಾಹಿತಿ ಕಲೆ ಹಾಕಿದ್ದಾರೆ. ಕಲಬುರ್ಗಿಯಲ್ಲಿ ಆರೋಪಿ ಪತ್ತೆಯಾಗುತ್ತಿದ್ದಂತೆಯೇ ಬೀದರ್ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಹಠಾತ್ ಕಡಿವಾಣ ಬಿದ್ದಿದೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ.

‘ಜಿಲ್ಲೆಯ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳ ಪತ್ತೆ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಔರಾದ್, ಬೀದರ್‌ ಹಾಗೂ ಹುಮನಾಬಾದ್‌ನಲ್ಲಿ ಭಾನುವಾರ ಶೋಧ ಕಾರ್ಯ ನಡೆಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಬಾರ್ಡರ್‌ ತಾಂಡಾದ ವ್ಯಾಪ್ತಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬೆಳೆಯ ಮಧ್ಯೆ ಬೆಳೆದಿದ್ದ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಎರಡು ವರ್ಷಗಳ ಹಿಂದೆ ಔರಾದ್–ಬೆಳಗಾವಿ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲೇ ವ್ಯಕ್ತಿಯೊಬ್ಬರು ಔರಾದ್‌ನಿಂದ ಗಾಂಜಾ ತುಂಬಿದ ಪೊಟ್ಟಣ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಇದಾದ ನಂತರವೂ ಔರಾದ್‌, ಕಮಲನಗರ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು