ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಶಾಲೆ ಅಂದ ಹೆಚ್ಚಿಸಿದ ಹಸಿರು, ಮಕ್ಕಳಿಗೆ ಆಹ್ಲಾದಕರ

ಮಕ್ಕಳಿಗೆ ಆಹ್ಲಾದಕರ ವಾತಾವರಣ ಕಲ್ಪಿಸಲು ನಿರ್ಮಾಣಗೊಂಡ ಉದ್ಯಾನ
Last Updated 22 ಆಗಸ್ಟ್ 2021, 5:27 IST
ಅಕ್ಷರ ಗಾತ್ರ

ಭಾಲ್ಕಿ: ಸುತ್ತಲೂ ಗಿಡ, ಮರಗಳಿಂದ ಕೂಡಿದ ಆಹ್ಲಾದಕರ ವಾತಾವರಣ. ಶಾಲೆಯ ಅಂದ ಹೆಚ್ಚಿಸಿದ ಹಸಿರು ಎಲೆಗಳ ಚಾವಣಿಯ ಹಂದರ. ಇಲ್ಲಿ ಪ್ರವೇಶಿಸಿದರೆ ಮೈ, ಮನಸ್ಸಿಗೆ ಏನೋ ಒಂಥರ ಆನಂದದ ಅನುಭವ.

ಇಂತಹ ಆಕರ್ಷಣೀಯ, ಮನಸೆಳೆಯುವ ವಾತಾವರಣ ಸೃಷ್ಟಿಯಾಗಿರುವುದು ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿರುವ ಚಿಕ್ಕ ಗ್ರಾಮ ಎಕಲಾಸಪೂರವಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.

ಈ ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಪರಿಸರ ಪ್ರೀತಿಗೆ ಸಾಕ್ಷಿಯಾಗಿ ಇಲ್ಲಿನ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆಗೆ ಹೇಳಿ ಮಾಡಿಸಿದ ತಾಣವಿದು. ಮಕ್ಕಳಲ್ಲಿ ವಿದ್ಯೆಯೊಂದಿಗೆ ಪರಿಸರದ ಕಾಳಜಿ ಬೆಳೆಸುವುದು ಕಷ್ಟದ ಕೆಲಸವಲ್ಲ ಎಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ.

ಕಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿವರೆಗಿನ ಕನ್ನಡ ಮತ್ತು ಮರಾಠಿ ಮಾಧ್ಯಮ ವಿಭಾಗ ಸೇರಿ 34 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಮಕ್ಕಳಿಗೆ ಶಾಲೆಯತ್ತ ಸೆಳೆಯಲು ವಾತಾವರಣವನ್ನು ಉಲ್ಲಸಿತ, ಆಕರ್ಷಣೀಯ, ಆನಂದಮಯ ಮಾಡಬೇಕು ಎಂದು ಸುಮಾರು ಐದಾರು ವರ್ಷಗಳಿಂದ ಶಾಲೆಯ ಒಳಭಾಗದಲ್ಲಿ ಲಿಂಬೆ, ನುಗ್ಗೆಕಾಯಿ, ಕರಿಬೇವು, ಚಮನ ಗಿಡ, ವಿವಿಧ ಬಗೆಯ ಹೂವಿನ ಗಿಡ, ಅಮೃತಬಳ್ಳಿಯ ಚಪ್ಪರ, ನೆಲ ಹಾಸಿನ ಮಧ್ಯಭಾಗದಲ್ಲಿ ಹುಲ್ಲನ್ನು ಬೆಳೆಸಿದ್ದೇವೆ ಎಂದು ಶಿಕ್ಷಕರು ತಿಳಿಸುತ್ತಾರೆ.

ಶಾಲೆಯಲ್ಲಿ ಮಕ್ಕಳು ನಲಿಯುತ್ತಾ, ಹಾಡುತ್ತಾ ಕಲಿಕೆಯಲ್ಲಿ ತೊಡಗಬೇಕು ಎಂದು ನೆಲ ಹಾಸಿಗೆ ಬಳಸಿದ ಸುಣ್ಣದ ಕಲ್ಲುಗಳ ಮೇಲೆ ಭಾಷೆ ವಿಷಯಗಳ ಮೂಲಾಕ್ಷರ, ಗಣಿತದ ಸಂಖ್ಯೆಯನ್ನು ಬಿಡಿಸಿದ್ದೇವೆ. ಇದು ಮಕ್ಕಳನ್ನು ಓದಿನತ್ತ ಸೆಳೆದು ಅವರಿಗರಿವಿಲ್ಲದೆಯೇ ಮೂಲಾಕ್ಷರ, ಅಂಕಿ-ಸಂಖ್ಯೆಗಳ ಜ್ಞಾನವನ್ನು ನೀಡುತ್ತಿದೆ. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪರಿಸರ ಬಗ್ಗೆ ಕಾಳಜಿ, ಪ್ರೀತಿ ಬೆಳೆಸಬೇಕು ಎಂದು ನಿತ್ಯ ಗಿಡ, ಮರಗಳ ಪಾಲನೆ, ಪೋಷಣೆಗೆ ನಮ್ಮೊಂದಿಗೆ ಸಹಕರಿಸಲು ಹೇಳುತ್ತೇವೆ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಗಿಡಗಳಿಗೆ ನೀರುಣಿಸಲು, ಸಸಿಗಳನ್ನು ನೆಡಲು ನಾ ಮುಂದು, ತಾ ಮುಂದು ಎನ್ನುತ್ತಾರೆ.

ಇನ್ನು ಶಾಲೆಯ ಚಿಕ್ಕ ಆವರಣದಲ್ಲಿಯೇ ಬೆಳೆದ ನುಗ್ಗೆಕಾಯಿ, ಲಿಂಬೆ ಹಣ್ಣಿನ, ಕರಿಬೇವನ್ನು ಬಿಸಿಯೂಟ ತಯಾರಿಸಲು, ಊಟದಲ್ಲಿ ಬಳಸುತ್ತೇವೆ ಎಂದು ಪ್ರಭಾರಿ ಮುಖ್ಯಶಿಕ್ಷಕ ರಾಜಕುಮಾರ ಘಂಟೆ, ದಿಲೀಪಕುಮಾರ ಚವ್ಹಾಣ, ರಾಜಕುಮಾರ ಸಜ್ಜನಶೆಟ್ಟಿ ಹೇಳುತ್ತಾರೆ.

ಮುಂಬರುವ ದಿನಗಳಲ್ಲಿ ಶಾಲೆಯ ವಾತಾವರಣವನ್ನು ಇನ್ನಷ್ಟು ಉತ್ತಮಗೊಳಿಸಲು ವರ್ಗಕೋಣೆಗಳ ಗೋಡೆಗಳ ಮುಂಭಾಗದಲ್ಲಿ ಕಲಿಕೆಗೆ ಪೂರಕವಾದ ಗೋಡೆ ಬರಹ, ಅಂದವಾದ ಚಿತ್ರಗಳನ್ನು ಬರೆಸುತ್ತೇವೆ. ನೆಲ ಹಾಸಿಗೆ ಬಳಸಿದ ಸುಣ್ಣದ ಕಲ್ಲುಗಳ ಮೇಲೂ ಪುನಃ ಮಹತ್ವದ ಅಂಶ, ಚಿತ್ರಗಳನ್ನು ಬಿಡಿಸಲು ಕ್ರಮ ಕೈಗೊಳ್ಳುತ್ತೇನೆ. ಸದ್ಯ ಎರಡು ಕೋಣೆಗಳ ಚಾವಣಿಯಿಂದ ನೀರು ಸುರಿಯುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಮೇಲಧಿಕಾರಿ, ಶಾಲಾ ಮೇಲುಸ್ತುವಾರಿ ಸಮಿತಿಯವರು ಕೂಡಿಕೊಂಡು ಶೀಘ್ರದಲ್ಲಿ ಪರಿಹರಿಸುವ ಭರವಸೆ ಇದೆ ಎಂದು ಪ್ರಭಾರಿ ಮುಖ್ಯಶಿಕ್ಷಕ ರಾಜಕುಮಾರ ಘಂಟೆ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT