ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ: ಸಂಸದ ಭಗವಂತ ಖೂಬಾ ಸೂಚನೆ
Last Updated 2 ಅಕ್ಟೋಬರ್ 2019, 6:14 IST
ಅಕ್ಷರ ಗಾತ್ರ

ಬೀದರ್‌: ‘ಕೊಳೆಗೇರಿಯ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು’ ಎಂದು ಸಂಸದ ಭಗವಂತ ಖೂಬಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು. ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳಲ್ಲಿ ರಸ್ತೆ ಹಾಗೂ ಗಟಾರ ನಿರ್ಮಿಸಬೇಕು. ಕೊಳೆಗೇರಿ ನಿವಾಸಿಗಳು ಗೌರವಯುತವಾಗಿ ಬದುಕುವಂತೆ ಆಗಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ಮಾತನಾಡಿ, ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 8,899 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿರುವ ನೋಂದಾಯಿತ ಆಸ್ಪತ್ರೆಗಳಿಗೆ ಹಣ ಪಾವತಿಯಾಗಿದೆ. ಈ ಯೋಜನೆಯಡಿ 2.46 ಲಕ್ಷ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಬಾಕಿ ಉಳಿದ ಕಾರ್ಡ್‌ಗಳ ವಿತರಣೆಗೆ ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಸರು ನೋಂದಣಿಗೆ ಜಿಲ್ಲೆಯಾದ್ಯಂತ 70 ಕೇಂದ್ರಗಳನ್ನು ತೆರೆಯಬೇಕಿತ್ತು. ಆದರೆ, ಕೇವಲ 13 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಹೆಚ್ಚಿನ ನೋಂದಣಿ ಸಾಧ್ಯವಾಗುತ್ತಿಲ್ಲ. ಹೆಚ್ಚು ಹೆಚ್ಚು ಸೇವಾ ಕೇಂದ್ರಗಳನ್ನು ತೆರೆಯಬೇಕು’ ಎಂದು ಖೂಬಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯಾವುದೇ ಅರ್ಹತೆ ಇಲ್ಲದ ಹಾಗೂ ತರಬೇತಿ ಪಡೆಯದ ನಕಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ದೂರುಗಳು ಬಂದಿವೆ. ನಕಲಿ ವೈದ್ಯರ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

‘ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಔಷಧ ದೊರೆಯುತ್ತಿಲ್ಲ. ಔಷಧಿಗೆ ಚೀಟಿ ಬರೆದು ಕೊಟ್ಟು ಹೊರಗಡೆ ಕಳಿಸಲಾಗುತ್ತಿದೆ. ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಸುಲಭವಾಗಿ ಔಷಧ ದೊರೆಯುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಔಷಧ ಸಂಗ್ರಹಿಸಿ ಇಟ್ಟುಕೊಳ್ಳಬೇಕು’ ಎಂದು ಬ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.

‘ಆಸ್ಪತ್ರೆಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗೆ ಬರುವ ರೋಗಿಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆ ಕಾಪಾಡುವಂತೆ ಅವರಿಗೆ ತಿಳಿವಳಿಕೆ ನೀಡಬೇಕು’ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು, ಸ್ವಚ್ಛ ಭಾರತ ಮಿಷನ್, ದೀನ್‌ ದಯಾಳ್‌ ಉಪಾಧ್ಯಾಯ ಯೋಜನೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT