ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿಲ್ಲದ ಜಗತ್ತು ಅಂಧಕಾರಮಯ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳು ಅಭಿವ್ಯಕ್ತಿಯ ಮಾಧ್ಯಮಗಳಾಗಿಯೇ ಕೆಲಸ ಮಾಡುತ್ತಿವೆ. ನಮ್ಮೊಳಗಿನ ನೋವು, ನಲಿವು ಹತಾಶೆಗಳೊಂದಿಗೆ ಸಲ್ಲದ ವಿದ್ಯಮಾನಗಳಿಗೆ ಪ್ರತಿಭಟನೆಯ ವೇದಿಕೆಯಾಗಿಯೂ ಬಳಕೆಯಾಗುತ್ತಿದೆ.

ಸದ್ಯ ಸಾಮಾಜಿಕ ಮಾಧ್ಯಮಗಳು ಅಂಥದ್ದೇ ಒಂದು ಅಭಿಯಾನಕ್ಕೆ ಸಾಕ್ಷಿಯಾಗಿವೆ. ಕಠುವಾ ಅತ್ಯಾಚಾರ ಪ್ರಕರಣ ಇದಕ್ಕೆ ನೆಪ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧದ ದನಿಯಾಗಿ ಈ ಅಭಿಯಾನ ಕಾವು ಪಡೆದಿದೆ. ಅನೇಕರು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ ಪಿಕ್ಚರ್, ಡಿಸ್‌ಪ್ಲೆ ಪಿಕ್ಚರ್ ಹಾಗೂ ಸ್ಟೇಟಸ್‌ಗಳನ್ನು ಕಪ್ಪು ಬಣ್ಣಕ್ಕೆ ಬದಲಿಸಿಕೊಂಡಿದ್ದಾರೆ. ಮಹಿಳಾ ದೌರ್ಜನ್ಯದ ಕರಿನೆರಳು ನಮ್ಮ ಸಮಾಜವನ್ನು ಆವರಿಸಿರುವುದರ ರೂಪಕ, ಜಗತ್ತಿನಲ್ಲಿ ಹೆಣ್ಣು ಅಳಿದರೆ ಆವರಿಸುವುದು ಕತ್ತಲು ಎಂಬುದುರ ಪ್ರತಿಬಿಂಬವಾಗಿ, ಮೌನ ಪ್ರತಿಭಟನೆಯ ತಣ್ಣನೆಯ ಸ್ವರೂಪವಾಗಿಯೂ ಇದು ಬಿಂಬಿತವಾಗುತ್ತಿದೆ.

ಹೆಣ್ಣಿಲ್ಲದ ಸೃಷ್ಟಿ ಅಂಧಕಾರ
ಮಹಿಳೆಯರು ಹಲವು ಶತಮಾನಗಳಿಂದ ದೌರ್ಜನ್ಯಗಳನ್ನು ವಿರೋಧಿಸುತ್ತಲೇ ಇದ್ದಾರೆ. ಆದರೂ ಬದಲಾವಣೆ ಸಾಧ್ಯವಾಗಿಲ್ಲ. ನಮ್ಮೊಳಗಿನ ಪುರುಷ ಪ್ರಾಧಾನ್ಯತೆಯನ್ನು ಮೀರಲು ಆಗಿಲ್ಲ. ಮಹಿಳೆಯರೇ ಇಲ್ಲದ ಸಮಾಜ ಹೇಗಿರುತ್ತೆ? ಎಲ್ಲರಲ್ಲೂ ಈ ಪ್ರಶ್ನೆ ಮೂಡಲಿ ಎನ್ನುವುದು ಅಭಿಯಾನದ ಉದ್ದೇಶ. ಬೆಳಿಗ್ಗೆ ನಾನು ಪ್ರೊಪೈಲ್‌ ಫೋಟೊ ಬದಲಾಯಿಸಿದ ತಕ್ಷಣ ಅನೇಕರು ಪ್ರಶ್ನಿಸಿದರು, ಚಡಪಡಿಸಿದರು. ಕನಿಷ್ಠ ಪಕ್ಷ ಈ ಚಡಪಡಿಕೆಯನ್ನು ಸೃಷ್ಟಿಸುವಲ್ಲಿಯಾದರೂ ಈ ಅಭಿಯಾನ ಸಫಲವಾಗಿದೆ. ಎಲ್ಲೋ ಹಿಂಸೆ ನಡೆದರೆ ನನಗೇನು? ನನ್ನ ಮನೆಯಲ್ಲಿ ಹೆಂಡತಿ, ಮಕ್ಕಳು ಸುಖವಾಗಿದ್ದರೆ ಸಾಕು ಎನ್ನುವ ಮನೋಭಾವ ಬದಲಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಹೆಣ್ಣಿಲ್ಲದ ಸೃಷ್ಟಿ ಹೀಗಿರುತ್ತೆ ನೋಡಿ ಎಂದು ಮುಖಕ್ಕೆ ಹಿಡಿಯಲು ಅಂಧಕಾರದ ಡಿ.ಪಿ. ಹಾಕಿಕೊಂಡಿದ್ದೇನೆ.
–ಜ್ಯೋತಿ ಹಿಟ್ನಾಳ್‌, ಸಾಮಾಜಿಕ ಕಾರ್ಯಕರ್ತೆ


ಜ್ಯೋತಿ ಹಿಟ್ನಾಳ್‌
**
ಆತ್ಮಗಳ ಬೆಳಕು
ನಮ್ಮ ಸಂಪ್ರದಾಯದಲ್ಲಿ ಯಾರಾದರೂ ಸತ್ತಾಗ 11ನೇ ದಿನದ ಹಾಲುತುಪ್ಪ ಆಚರಣೆವರೆಗೆ ಒಂದು ದೀಪ ಹಚ್ಚಿಡುತ್ತಾರೆ. ಆ ಸಂಪ್ರದಾಯವನ್ನು ನಾನು ಗೌರವಿಸುತ್ತೇನೆ. ಹಾಗಾಗಿಯೇ ನಾನು ನನ್ನ ಪ್ರೊಪೈಲ್‌ ಪಿಕ್ಚರ್ ಸಂಪೂರ್ಣ ಕಪ್ಪು ಮಾಡಿಲ್ಲ. ನಡುವೆ ಒಂದು ಮೇಣದ ಬತ್ತಿಯನ್ನೂ ಹಚ್ಚಿದ್ದೇನೆ. ಕಠುವಾದಲ್ಲಿ ದೌರ್ಜನ್ಯಕ್ಕೆ ಒಳಗಾದವಳು ಮುಗ್ಧ ಹುಡುಕಿ. ಆಂಥವರ ಆತ್ಮಗಳ ಬೆಳಕು ಆರದಿರಲಿ ಎನ್ನುವುದು ನನ್ನ ಉದ್ದೇಶ.
–ಅಕ್ಷತಾ ಪಾಂಡಪಪುರ


ಅಕ್ಷತಾ ಪಾಂಡಪಪುರ

**
ಗುಬ್ಬಿದನಿಗೆ ಗಟ್ಟಿ ನಿಲುವು

ಜನರಲ್ಲಿ ಸೂಕ್ಷ್ಮ ಸಂವೇದನೆ ಬಿತ್ತುವ ಉದ್ದೇಶದಿಂದ ನನ್ನ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಿಸಿಕೊಂಡಿದ್ದೇನೆ. ಇಂದು ಬಸವ ಜಯಂತಿ. ಬಸವಣ್ಣನ ಭಾವಚಿತ್ರವನ್ನು ಹಾಕಿಕೊಳ್ಳಬಹುದಿತ್ತು. ಆದರೆ, ಬಸವ ತತ್ವಗಳು ಮರೆಯಾಗಿರುವ ಸಂದರ್ಭದಲ್ಲಿ, ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ. ಕರಿಛಾಯೆಯಲ್ಲಿ ಬದುಕುತ್ತಿರುವ ಈ ಸನ್ನಿವೇಶದಲ್ಲಿ ಮಹಿಳಾ ದೌರ್ಜನ್ಯ ವಿರೋಧಿಸಿ ಈ ಬಗೆಯ ಪ್ರೊಪೈಲ್ ಹಾಕಿಕೊಂಡಿದ್ದೇನೆ. ಇದರಿಂದ ಸಮಾಜದಲ್ಲಿ ಬದಲಾವಣೆ ಆಗುತ್ತದೆ ಎಂಬ ಯಾವ ನಂಬಿಕೆಯೂ ಇಲ್ಲ. ಆದರೆ ಜಾಗೃತಿ ಮೂಡಿಸಲು ಇದು ಸಣ್ಣ ದಾರಿದೀಪ ಆಗಬಹುದು. ಜನರು ಇವರೇಕೆ ಹೀಗೆ ಹಾಕಿಕೊಂಡಿದ್ದಾರೆ ಎಂದು ಕೆಲವರಾದರೂ ಯೋಚಿಸಿದರೆ, ಈ ಪೋಸ್ಟ್‌ಗಳು ಸಾರ್ಥಕತೆ ಪಡೆದಂತೆ. ನನ್ನ ಪ್ರೊಫೈಲ್ ಪಿಕ್ಚರ್ ನನ್ನ ನಿಲುವುಗಳ ಅಭಿವ್ಯಕ್ತಿಗೆ ವೇದಿಕೆಯೂ ಹೌದು. ಆದಾಗ್ಯೂ ನನ್ನಂತೆಯೇ ಯೋಚಿಸುವ ಒಂದು ಸಮೂಹದ ಸೃಷ್ಟಿಗೆ ಇದು ಕಾರಣವಾಗಿದೆ. ನನ್ನಂತೆ ಯೋಚಿಸುವ ನಾಲ್ಕು ಸಾವಿರ ಜನರ ಒಂದು ಸಮೂಹ ಸೃಷ್ಟಿಯಾಗಿದೆ. ಗುಬ್ಬಿದನಿಗೊಂದು ಗಟ್ಟಿ ನಿಲುವು ದೊರೆಯಲಿದೆ ಎನ್ನುವ ಆಶಯ ನನ್ನದು.
  –ದೀಪಾ ಗಿರೀಶ್‌, ಕವಯತ್ರಿ
**
ಅಂಧಕಾರದಲ್ಲಿನ ಮನಸ್ಸುಗಳು ಬೆಳಕಿಗೆ ಬರಲಿ
ಹೆಣ್ಣಿನ ಮೇಲೆ ಯಾವುದೇ ಕೆಟ್ಟ ದೃಷ್ಠಿಗಳು ಬೀರದಿರಲಿ. ಪುರುಷ ಪ್ರಧಾನ ಮನಸ್ಥಿತಿಗಳಿಗೆ ಕನಿಷ್ಟಪಕ್ಷ ನಮ್ಮ ಮನಸ್ಥಿತಿಯಿಂದ ಏನೋ ತಪ್ಪಾಗಿದೆ. ಅದನ್ನು ಮಹಿಳೆಯರು ವಿರೋಧಿಸುತ್ತಿದ್ದಾರೆ ಎನ್ನುವುದನ್ನು ತೋರಿಸುವುದು ಅಭಿಯಾನದ ಉದ್ದೇಶ. ಜೊತೆಗೆ ಅನೈತಿಕತೆಯನ್ನು ವಿರೋಧಿಸುವವರು ಇದ್ದಾರೆ, ಎಲ್ಲದಕ್ಕೂ ಮೌನ ಸಮ್ಮತಿ ನಿರೀಕ್ಷಿಸುವುದು ತಪ್ಪು ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇನೆ. ಕಪ್ಪು ಅಂಧಕಾರದ ಸಂಕೇತ. ಅಂಧಕಾರದಲ್ಲಿನ ಮನಸ್ಸುಗಳು ಬೆಳಕಿಗೆ ಬರಲಿ ಎಂಬ ಆಶಯವೂ ಅಡಗಿದೆ. ಕಾಮುಕರ ಕಪ್ಪುದೃಷ್ಟಿಗೆ ಹೆಣ್ಣು ಬಲಿಯಾಗದಿರಲಿ ಎಂಬ ಸಂದೇಶ ಇದರಲ್ಲಿದೆ.
–ಹೇಮಲತಾ ಮೂರ್ತಿ, ಕವಯತ್ರಿ


ಹೇಮಲತಾ ಮೂರ್ತಿ

**
ದೌರ್ಜನ್ಯದ ವಿರುದ್ಧದ ಮೌನ ಪ್ರತಿಭಟನೆ
ಹೆಣ್ಣಿನ ದೌರ್ಜನ್ಯದ ವಿರುದ್ಧದ ಮೌನ ಪ್ರತಿಭಟನೆಯ ಭಾಗವಾಗಿ ಈ ಅಭಿಯಾನ. ಒಂದು ದಿನದ ಮಟ್ಟಿಗಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯ ಇಲ್ಲದಿರುವಿಕೆಯ ಭಾಗವಾಗಿ ಕಪ್ಪು ಪ್ರೊಪೈಲ್‌ ಹಾಕಲಾಯಿತು. ಪ್ರಶ್ನಾರ್ಥಕವಾಗಿ ಬೇಸರದ ಅಭಿವ್ಯಕ್ತಿಯಾಗಿ ನವಮಾಧ್ಯಮಗಳಲ್ಲಿ  ಸಮಾನ ಮನಸ್ಕ ಸಮೂಹದಲ್ಲಿ ಈ ಕಳಕಳಿ ಆರಂಭಿಸಿದ್ದೇವೆ.
–ಶುಭಾ, ಎ.ಆರ್. ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT