ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಕಂಪನಿಗಳನ್ನು ಅನುದಾನಕ್ಕೆ ಒಳಪಡಿಸಿ

‘ಗುಂಗು ಹಿಡಿಸ್ಯಾಳ ಗೌರಿ’ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಸೋನಾರೆ ಆಗ್ರಹ
Last Updated 3 ಜುಲೈ 2018, 15:28 IST
ಅಕ್ಷರ ಗಾತ್ರ

ಬೀದರ್: ‘ನಾಟಕ ಕಲೆಯ ಉಳಿವಿಗಾಗಿ ಸರ್ಕಾರ ನಾಟಕ ಕಂಪನಿಗಳನ್ನೂ ಅನುದಾನಕ್ಕೆ ಒಳಪಡಿಸಬೇಕು. ಕಲಾವಿದರಿಗೆ ಮಾಸಿಕ ₹ 25 ಸಾವಿರದಿಂದ ₹ 50 ಸಾವಿರ ವೇತನ ಕೊಡಬೇಕು’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಆಗ್ರಹಿಸಿದರು.

ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಮೈಂದರ್ಗಿಯ ಶ್ರೀ 1008 ರೇಣುಕಾಚಾರ್ಯ ನಾಟ್ಯ ಸಂಘವು ಗಾನಯೋಗಿ ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆ ಹಾಗೂ ಕೆ. ಪ್ರಕಾಶ ರಚಿಸಿದ ‘ಗುಂಗು ಹಿಡಿಸ್ಯಾಳ ಗೌರಿ’ ನಾಟಕದ ಬೆಳ್ಳಿ ಮಹೋತ್ಸವ ಪ್ರಯುಕ್ತ ನಗರದ ಬಿ.ವಿ.ಬಿ. ಕಾಲೇಜು ಮುಂಭಾಗದಲ್ಲಿ ಏರ್ಪಡಿಸಿದ್ದ 100 ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಾಗಲೇ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿ ಶಿಕ್ಷಕರಿಗೆ ವೇತನ ಒದಗಿಸುತ್ತಿದೆ. ನಾಟಕ ಕಂಪನಿ ಹಾಗೂ ಕಲಾವಿದರನ್ನೂ ಅನುದಾನಕ್ಕೆ ಒಳಪಡಿಸಿದರೆ ನಶಿಸಿ ಹೋಗುತ್ತಿರುವ ನಾಟಕ ಕಂಪನಿಗಳಿಗೆ ಮರು ಜೀವ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ನಾಟಕ ಕಂಪನಿಗಳಿಗೆ ವಾರ್ಷಿಕ ₹ 5 ಲಕ್ಷದಿಂದ ₹ 10 ಲಕ್ಷ ಅನುದಾನ ನೀಡಿದರೆ ಸಾಲದು. ಕಲಾವಿದರು ಹಾಗೂ ಅವರ ಕುಟುಂಬದ ನಿರ್ವಹಣೆಯನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ₹ 20 ಲಕ್ಷದಿಂದ ₹ 40 ಲಕ್ಷ ಅನುದಾನ ಒದಗಿಸಬೇಕು. ಈ ಮೂಲಕ ಕಲಾವಿದರು ಗೌರವಯುತ ಬದುಕು ಸಾಗಿಸಲು ನೆರವಾಗಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಈಗ ಅಂತರ್ಜಾಲ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ತಂತ್ರಜ್ಞಾನಗಳ ಯುಗ ಇದೆ. ಇಂಥದ್ದರಲ್ಲಿ ನಾಟಕ ಕಲೆಯನ್ನು ಉಳಿಸಲು ಜನ ನಾಟಕಗಳನ್ನು ಹೆಚ್ಚು ಹೆಚ್ಚಾಗಿ ವೀಕ್ಷಿಸಬೇಕು’ ಎಂದು ಹೇಳಿದರು.

‘ಅನಾಥ ಹಾಗೂ ಅಂಥ ಮಕ್ಕಳಿಗಾಗಿ ಸಂಗೀತ ಶಾಲೆ ಆರಂಭಿಸಿ ಅವರ ಬಾಳಲ್ಲಿ ಬೆಳಕು ಮೂಡಿಸಿದ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆ ಪ್ರಯುಕ್ತ ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡುತ್ತಿರುವ ನಾಟಕ ಕಂಪನಿಯ ಕಾರ್ಯ ಶ್ಲಾಘನೀಯ’ ಎಂದರು.

ನಾಟಕ ಜೀವಂತ ಇದ್ದರೆ ಮಾತ್ರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಭಾಷೆ ಉಳಿಯುತ್ತದೆ. ತಂತ್ರಜ್ಞಾನ ಯುಗದಲ್ಲೂ ನಾಟಕವನ್ನು ಉಳಿಸಿಕೊಂಡು ಬರುತ್ತಿರುವ ನಾಟಕ ಕಂಪನಿಗಳು ಹಾಗೂ ಕಲಾವಿದರ ನೆರವಿಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬ್ರಿಮ್ಸ್ ಸದಸ್ಯ ಫರ್ನಾಂಡೀಸ್ ಹಿಪ್ಪಳಗಾಂವ್, ಕರ್ನಾಟಕ ಕಲಿತ ಕಲಾ ಅಕಾಡೆಮಿಯ ಸದಸ್ಯ ಯೋಗೀಶ ಮಠ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋನಾಳಕರ್, ಪ್ರಮುಖರಾದ ಭೀಮಾಶಂಕರ ಸೊಲ್ಲಾಪುರ, ಸುಕನ್ಯಾ ದಾವಣಗೆರೆ, ಹಫೀಜಾ ಬೇಗಂ, ಗಿರಿ ದಾವಣಗೆರೆ, ಅವಿನಾಶ ಅಕ್ಕಲಕೋಟ, ವಿಜಯಕುಮಾರ ಹೆಗಡೆ, ಸಿದ್ದಯ್ಯ ನಂದಿಕೋಲಮಠ, ಪದ್ಮಾವತಿ, ನಾಟಕ ಕಂಪನಿ ಮಾಲೀಕ ಎಂ.ಎಸ್ ಮಡ್ಡೆ, ಪಾಪು ಅಕ್ಕಲಕೋಟ, ಶೌಕತ್ ಅಲಿ ಬ್ಯಾಡಗಿ, ಕುಮಾರ ಬಿಜಾಪುರ, ಸದಾಶಿವಯ್ಯ ಸೇಗುಣಗಿ ಉಪಸ್ಥಿತರಿದ್ದರು.

ಖಜಾಸಾಬ ಅಮಿನಗಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT