ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಿ

ಹಿರಿಯ ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಹೇಳಿಕೆ
Last Updated 16 ಸೆಪ್ಟೆಂಬರ್ 2019, 14:11 IST
ಅಕ್ಷರ ಗಾತ್ರ

ಬೀದರ್: ‘ವಿದೇಶದಲ್ಲಿ ನಾಡಿನ ಸಂಸ್ಕೃತಿ ಹಾಗೂ ಪ್ರತಿಭಾ ಶಕ್ತಿಯನ್ನು ಪ್ರದರ್ಶಿಸಲು ಜನಪದ ಕಲಾವಿದರಿಗೂ ಅವಕಾಶ ಕಲ್ಪಿಸುವ ಅಗತ್ಯ ಇದೆ’ ಎಂದು ಹಿರಿಯ ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರಥಮ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನಪದ ಕಲೆ ಎಲ್ಲ ಕಲೆಗಳ ತಾಯಿ ಬೇರಾಗಿದೆ. ಈ ಕಲೆಯನ್ನು ಬೆಳೆಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿದೆ. ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರ ಕೆಲವು ಕಲಾವಿದರನ್ನು ವಿದೇಶಕ್ಕೆ ಕಳಿಸುತ್ತಿದೆ. ಕಲಾಭಿಮಾನಿಗಳು ಹಾಗೂ ದಾನಿಗಳು ಅರ್ಹರನ್ನು ವಿದೇಶಕ್ಕೆ ಕಳಿಸಿಕೊಡಲು ನೆರವಾಗಬೇಕು’ ಎಂದು ತಿಳಿಸಿದರು.

‘ಬೀದರ್ ಜಿಲ್ಲೆಯ ಜಾನಪದ ಕವಿ ಶಂಭುಲಿಂಗ ವಾಲ್ದೊಡ್ಡಿ, ಭರತ ನಾಟ್ಯ ಕಲಾವಿದೆ ಉಷಾ ಪ್ರಭಾಕರ ಹಾಗೂ ಅಥಣಿ ದೇವದಾಸಿ ರಾಧಾಬಾಯಿ ಅವರಿಗೆ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿದ್ದೆ. ಮುಂದೆಯೂ ಬೀದರ್ ಜಿಲ್ಲೆಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

‘ಬೀದರ್ ಉತ್ಸವದಲ್ಲಿ ಹಿಂದಿ ಚಲನಚಿತ್ರ ನಟರು, ಗಾಯಕರಿಗೆ ಅವಕಾಶ ನೀಡುವ ಮೂಲಕ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗಿದೆ. ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಿ ಅವರ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿದೆ’ ಎಂದು ತಿಳಿಸಿದರು.
‘ನವೆಂಬರ್ ಮೂರನೇ ವಾರದಲ್ಲಿ ಮದ್ರಾಸ್‌ನಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ಗಾಯಕಿ ರೇಖಾ ಸೌದಿ ಅವರಿಗೆ ಆಹ್ವಾನ ನೀಡಲಾಗಿದೆ’ ಎಂದು ತಿಳಿಸಿದರು.

ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ‘ದ್ರೋಣಾಚಾರ್ಯರಂಥ ಬಹಳಷ್ಟು ಗುರುಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ಈ ಭಾಗದ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರೆಯುತ್ತಿಲ್ಲ. ಪ್ರತಿಭೆಗಳೂ ಬೆಳಕಿಗೆ ಬರುತ್ತಿಲ್ಲ. ಈ ತಾರತಾಮ್ಯವನ್ನು ಹೋಗಲಾಡಿಸಬೇಕಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಗಾಯಕಿ ರೇಖಾ ಸೌದಿ ಅವರು ವಿದೇಶದಲ್ಲಿ ಕಾರ್ಯಕ್ರಮ ನೀಡುವುದಾದರೆ ₹ 5 ಲಕ್ಷ ನೆರವು ನೀಡಲಾಗುವುದು. ಅವರು ಕಾರ್ಯಕ್ರಮ ನಿಗದಿಯಾದ ದಿನಾಂಕ ತಿಳಿಸಿದರೆ ಒಂದು ತಿಂಗಳು ಮುಂಚಿತವಾಗಿಯೇ ಅವರ ಖಾತೆಯಲ್ಲಿ ಹಣ ಜಮಾ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ರಾಮಕೃಷ್ಣ-ವಿವೇಕಾನಂದ ಆಶ್ರಮದ ಜ್ಯೋತಿಮರ್ಯಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಶಾಸಕ ಅಶೋಕ ಖೇಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ‘ಬಿದರಿ’ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ, ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಸಿದ್ಧಪ್ಪ ಹೊಟ್ಟಿ, ವೀರಭದ್ರಪ್ಪ ಸಿಂಪಿ, ರಾಜಶೇಖರ ಅಂಗಡಿ, ಸಿದ್ಧರಾಮ ಕಲ್ಮಠ, ಎಂ.ಎಸ್. ಮನೋಹರ, ಅಮಿತಕುಮಾರ ಜನವಾಡಕರ್, ಶಾಲಿನಿ ಜಯಂತಿ, ರಾಜಕುಮಾರ ಹೆಬ್ಬಾಳೆ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಂ.ಮಚ್ಚೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT