ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಗಿಂತ ಗೋ ಸೇವೆ ಕಾರ್ಯ ಶ್ರೇಷ್ಠ

ಗೋ ಸೇವಾ ಸದಸ್ಯತ್ವ ಅಭಿಯಾನದಲ್ಲಿ ನಿರ್ಭಯಾನಂದ ಸರಸ್ವತಿ ಹೇಳಿಕೆ
Last Updated 8 ಫೆಬ್ರುವರಿ 2023, 10:28 IST
ಅಕ್ಷರ ಗಾತ್ರ

ಬೀದರ್: ‘ಪೂಜೆ, ಅಭಿಷೇಕಗಳಿಗಿಂತ ಗೋವುಗಳ ಸೇವೆ ಶ್ರೇಷ್ಠ ಕಾರ್ಯವಾಗಿದೆ’ ಎಂದು ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಇಲ್ಲಿನ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದರ ಆಶ್ರಮದ ಗೋ ಶಾಲೆಯಿಂದ ಹಮ್ಮಿಕೊಂಡಿರುವ ನಿತ್ಯ ಗೋ ಸೇವಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೋವು ಪೂಜನೀಯ ಮಾತ್ರವಲ್ಲ ಸಮಾಜದ ಆರೋಗ್ಯ ರಕ್ಷಕವಾಗಿವೆ. ನಾವು ಗೋವುಗಳಿಗೆ ಉಳಿಸಿ, ಬೆಳೆಸಿದರೆ ಅವು ನಮ್ಮನ್ನು ಹಾಗೂ ಸಮಾಜವನ್ನು ಕಾಪಾಡುತ್ತವೆ. ಒಂದು ಗೋವು ಒಂದು ಕುಟುಂಬದ ಆರೋಗ್ಯ ರಕ್ಷಣೆ ಮಾಡುವ ತಾಕತ್ತು ಹೊಂದಿದೆ. ಹೀಗಾಗಿ ಎಲ್ಲರೂ ಗೋ ಸೇವೆಯ ಸಂಕಲ್ಪ ಮಾಡಬೇಕು’ ಎಂದು ಮನವಿ ನೀಡಿದರು.

‘ಮಂದಿರಗಳಲ್ಲಿ ಪೂಜೆ, ದಾಸೋಹ, ಅಭಿಷೇಕ ಇತರೆ ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ನಿತ್ಯ ಸೇವೆಗಳು ನಡೆಯುತ್ತವೆ. ಇದೀಗ ಬೀದರ್ ರಾಮಕೃಷ್ಣ ಆಶ್ರಮದ ಗೋಶಾಲೆಯು ನಿತ್ಯ ಗೋ ಸೇವಾ ಸದಸ್ಯತ್ವ ಆರಂಭಿಸಿ ಮಾದರಿ ಹೆಜ್ಜೆ ಇರಿಸಿದೆ. ಎಲ್ಲ ಧಾರ್ಮಿಕ ಸೇವಾ ಕಾರ್ಯಗಳಿಗಿಂತಲೂ ನಿತ್ಯ ಗೋ ಸೇವೆ ಮಾಡುವುದು ಶ್ರೇಷ್ಠ ಎನಿಸುತ್ತದೆ’ ಎಂದು ಹೇಳಿದರು.


‘ವರ್ಷದ 365 ದಿನಕ್ಕೆ ತಲಾ ಒಬ್ಬರು ತಮ್ಮವರ, ಕುಟುಂಬದವರ ಹೆಸರಿನಲ್ಲಿ ಸದಸ್ಯತ್ವ ಪಡೆಯುವ ಮೂಲಕ ದೇಸಿ ಗೋವಿನ ತಳಿ ಸಂರಕ್ಷಣೆ, ಸಂವರ್ಧನೆಗಾಗಿ ಐದು ವರ್ಷಗಳಿಂದ ಶ್ರಮಿಸುತ್ತಿರುವ ಆಶ್ರಮಕ್ಕೆ ಸಹಕರಿಸಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಭಾರತೀಯ ಸಂಸ್ಕೃತಿ, ಪರಂಪರೆ ಉತ್ಕೃಷ್ಟ ಮಾತ್ರವಲ್ಲ ವೈಜ್ಞಾನಿಕ ನೆಲೆಗಟ್ಟು ಹೊಂದಿದೆ. ಅನೇಕ ಮಾರಕ ರೋಗಗಳಿಗೆ ಗೋ ಮೂತ್ರ, ಸಗಣಿ ರಾಮಬಾಣ ಎಂಬುದು ‌ಸಂಶೋಧನೆಗಳು ಸಾಬೀತುಪಡಿಸಿವೆ. ಗೋವುಗಳ ರಕ್ಷಣೆ ಎಂದರೆ ಭಾರತೀಯ ಪರಂಪರೆಯ ರಕ್ಷಣೆ‌ ಎಂಬುದು ಎಲ್ಲರೂ ಅರಿಯಬೇಕು’ ಎಂದು ತಿಳಿಸಿದರು.

ಒಂದು ಶಾಲೆ, ಆಸ್ಪತ್ರೆ ನಡೆಸುವುದು ಇಂದಿನ ಆಧುನಿಕ ಕಾಲದಲ್ಲಿ ಕಷ್ಟದ ಕೆಲಸವೇನಲ್ಲ. ಆದರೆ ಒಂದು ಗೋ ಶಾಲೆ ನಡೆಸುವುದು ಕಷ್ಟ ಮಾತ್ರವಲ್ಲ, ನಿತ್ಯವೂ ದೊಡ್ಡ ಸವಾಲಿನ ಕೆಲಸವಾಗಿದೆ. ಭಕ್ತರ, ಗೋ ಪ್ರೇಮಿಗಳ ಉದಾರ ದೇಣಿಗೆ, ಸಹಕಾರದಿಂದ ಕಳೆದ ಐದು ವರ್ಷಗಳಿಂದ ಗೋ ಶಾಲೆ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಹೆಚ್ಚಿನ ಗೋ ಪ್ರೇಮಿಗಳು ಸದಸ್ಯತ್ವ ಪಡೆದು ಗೋ ಶಾಲೆ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಲು ಸಹಕಾರ ನೀಡಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಗೋ ಶಾಲೆ ಅಧ್ಯಕ್ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮನವಿ ಮಾಡಿದರು.

ಕಲಬುರಗಿ ಆಶ್ರಮದ ಸ್ವಾಮಿ ಮಹೇಶ್ವರಾನಂದ ಮಹಾರಾಜ, ಹೊಸಪೇಟೆಯ ಸ್ವಾಮಿ ಸುಮೇಧಾನಂದ ಮಹಾರಾಜ ಇದ್ದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಕೋಳಿ ಅವರು ಪೂಜ್ಯರಿಂದ ಮೊದಲ ಸದಸ್ಯತ್ವ ಪಡೆದರು.

ಜೀವನ ಮೌಲ್ಯ ಪ್ರವಚನ ಏ.8ರಿಂದ

ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಏ.2ರಿಂದ 9ರವರೆಗೆ ರಾಮಕೃಷ್ಣ ಆಶ್ರಮದ ಗೋ ಶಾಲೆ ಆವರಣದಲ್ಲಿ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ತಿಳಿಸಿದ್ದಾರೆ.

ನಿತ್ಯ ಸಂಜೆ 6.30ರಿಂದ 8ರವರೆಗೆ ಜೀವನ ಮೌಲ್ಯ ಕುರಿತು ಪ್ರವಚನ ನೀಡುವರು. ಆರು ವರ್ಷ ಬಳಿಕ ಪೂಜ್ಯರು ಬೀದರ್ ನಲ್ಲಿ ತಮ್ಮ ಜ್ಞಾನಸುಧೆ ಹರಿಸಲು ಒಪ್ಪಿಕೊಂಡಿದ್ದಾರೆ. ಪ್ರವಚನಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT