ಶನಿವಾರ, ಮಾರ್ಚ್ 28, 2020
19 °C
ಲಾರಿ ಚಾಲಕರಿಂದ ಹಣಕ್ಕೆ ಬೇಡಿಕೆ: ರೈತರ ಆರೋಪ

ಗೋದಾಮಿಗೆ ತೊಗರಿ ಸಾಗಣೆ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದ ಖರೀದಿ ಕೇಂದ್ರದಲ್ಲಿ ಖರೀದಿಸಿದ ತೊಗರಿಯನ್ನು ಸಾಗಿಸಲು ಲಾರಿ ಚಾಲಕರು ವಿಳಂಬ ಮಾಡುತ್ತಿರುವುದರಿಂದ ರೈತರು ರಾತ್ರಿಯಿಡೀ ತೊಗರಿ ಚೀಲದ ಕಾವಲಿಗೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಈ ಖರೀದಿ ಕೇಂದ್ರದ ಆವರಣ, ಸಹಕಾರ ಸಂಘದ ಉಗ್ರಾಣ ತೊಗರಿ ಚೀಲಗಳಿಂದ ಭರ್ತಿಯಾಗಿದೆ. ತೊಗರಿ ಖರೀದಿ ಕಾರ್ಯ ಮುಂದುವರಿದರೂ ಕಲಬುರ್ಗಿ ಉಗ್ರಾಣಕ್ಕೆ ಸಾಗಿಸಲು ಲಾರಿ ಚಾಲಕರು ಪ್ರತಿ ಲಾರಿಗೆ ₹1ರಿಂದ 2 ಸಾವಿರ ಹಣ ಕೇಳುತ್ತಿದ್ದಾರೆ. ಇಷ್ಟೊಂದು ಹಣ ಯಾರು ಕೊಡಬೇಕು. ನ್ಯಾಪೆಡ್‌ ಕಂಪನಿಯು ಪ್ರತಿ ಲಾರಿ ಮತ್ತು ಚಾಲಕರು ಹಾಗೂ ಕೂಲಿ ಕಾರ್ಮಿಕರಿಗೆ ದರ ನಿಗದಿಪಡಿಸಿದ್ದಾರೆ. ಆದರೂ ರೈತರಿಂದ ಹಣ ವಸೂಲಿಗೆ ಮುಂದಾಗಿರುವುದಕ್ಕೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಕಾಂತ ಕಡಗಂಚಿ ಆಕ್ರೋಶ ವ್ಯಕ್ತಪಡಿಸಿದರು.

ಮಾದನ ಹಿಪ್ಪರಗಾ ಸುತ್ತಲಿನ ಗ್ರಾಮದ ಒಟ್ಟು 1250 ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದಾರೆ. ಮಂಗಳವಾರದ ಅಂತ್ಯದವರೆಗೆ 260 ರೈತರ ತೊಗರಿ ಖರೀದಿಸಲಾಗಿದೆ. 600ಕ್ಕೂ ಹೆಚ್ಚು ಚೀಲ ತೊಗರಿ ದಾಸ್ತಾನು ಇಲ್ಲಿದ್ದು, ಹೊಸ ರೈತರೂ ತೊಗರಿ ತರಲು ಅಡ್ಡಿಯಾಗಿದೆ. ಅಲ್ಲದೆ ರೈತರಿಂದ ತೊಗರಿ ಖರೀದಿಯಾದರೂ ಅದಕ್ಕೆ ಸೂಕ್ತ ರಕ್ಷಣೆ ಇಲ್ಲವಾಗಿದೆ.

ರಾತ್ರಿ ಸಮಯದಲ್ಲಿ ಹಂದಿಗಳ ಹಾವಳಿ, ಕಿಡಿಗೇಡಿಗಳ ಉಪಟಳ ತಪ್ಪಿದ್ದಲ್ಲ. ತೊಗರಿ ಚೀಲ ಹರಿದು ತೊಗರಿ ಹಾಳಾಗುತ್ತಿದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಶಿವಲಿಂಗಪ್ಪ ಜಮದಾರ ತಿಳಿಸಿದರು.

ಲಾರಿ ಬಂದು ತೊಗರಿ ತೆಗೆದುಕೊಂಡು ಹೋದರೆ ಮಾತ್ರ ಖರೀದಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಖರೀದಿ ಕಾರ್ಯಕ್ಕೆ ಅಡಚಣೆ ಆಗುತ್ತಿರುವುದರಿಂದ ಬುಧವಾರದಿಂದ ತೊಗರಿ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸಹಕಾರ ಸಂಘದ ಕಾರ್ಯದರ್ಶಿ ಶಿವಕುಮಾರ ಪಾಟೀಲ ತಿಳಿಸಿದರು.

ಲಾರಿ ಚಾಲಕರ ವರ್ತನೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ರೈತರು ಮುಂದಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರೈತರಾದ ಸಿದ್ದಾರೂಡ, ಶಿವಲಿಂಗಪ್ಪ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು