ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಧಳಿ ಸಮಾಜದ ಬೇಡಿಕೆ ಈಡೇರಿಸದಿದ್ದರೆ ಹೋರಾಟ

ಅಭಿಯಾನ ಪ್ರಮುಖ ಸಂಜಯ ಕದಮ ಎಚ್ಚರಿಕೆ
Last Updated 22 ನವೆಂಬರ್ 2019, 15:20 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೊಂಧಳಿ ಸಮಾಜದ 27 ಬೇಡಿಕೆಗಳನ್ನು ಹದಿನೈದು ದಿನಗಳಲ್ಲಿ ಈಡೇರಿಸದಿದ್ದರೆ ಮರಾಠರ ಮಾದರಿಯಲ್ಲಿ ದೇಶದಾದ್ಯಂತ ಬೃಹತ್ ರ್‍ಯಾಲಿಗಳನ್ನು ನಡೆಸಲಾಗುವುದು’ ಎಂದು ಗೊಂಧಳಿ ಸಮಾಜ ಜೋಡೋ ಅಭಿಯಾನದ ಪ್ರಮುಖ ಸಂಜಯ ಕದಮ ಎಚ್ಚರಿಸಿದರು.

ಗೊಂಧಳಿ ಸಮಾಜದ ವತಿಯಿಂದ ನಗರದ ಹಂಗರಗಿ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರವರ್ಗ 1 ರಲ್ಲಿ ಬರುವ ಗೊಂಧಳಿ ಸಮಾಜದ 46 ಉಪ ಜಾತಿಗಳ ಒಂದು ಕುಟುಂಬಕ್ಕೂ ಕೇಂದ್ರದ ಉಜ್ವಲ ಯೋನೆಯಡಿ ಅಡುಗೆ ಅನಿಲ ಸೌಲಭ್ಯ ಒದಗಿಸಿಲ್ಲ. ಮುದ್ರಾ ಯೋಜನೆ ಲಾಭವೂ ದೊರಕಿಲ್ಲ. ಪ್ರಧಾನಿಮಂತ್ರಿ ಮನ್‌ ಕೀ ಬಾತ್ ಮೂಲಕ ಎಲ್ಲ ಸಮಾಜಗಳ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಆದರೆ, ಗೊಂಧಳಿ ಸಮಾಜದವರ ಮನದ ಮಾತನ್ನು ಕೇಳುತ್ತಿಲ್ಲ’ ಎಂದು ಆರೋಪಿಸಿದರು.

‘ದೇಶದಲ್ಲಿ ಗೊಂಧಳಿ ಸಮಾಜದ ಸುಮಾರು ಐದು ಕೋಟಿ ಜನರಿದ್ದಾರೆ. ಶಿಕ್ಷಣ, ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’ ಎಂದು ದೂರಿದರು.

‘ಗೊಂಧಳಿ ಸಮುದಾಯದ ಕಲಾವಿದರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ₹ 8 ಸಾವಿರ ಗೌರವ ಧನ ಕೊಡಬೇಕು.
‘ಸಮಾಜದ ಜಾಗೃತಿಗೆ 2017 ರ ಜೂನ್ 7 ರಿಂದ ಬೈಕ್ ರ್‍ಯಾಲಿ ಆರಂಭಿಸಿ, 22 ರಾಜ್ಯಗಳಲ್ಲಿ ಸಂಚರಿಸಿ ಬೀದರ್‌ಗೆ ಬಂದಿದ್ದೇನೆ’ ಎಂದು ಹೇಳಿದರು.

ಗೊಂಧಳಿ ಸಮಾಜದ ಮುಖಂಡ ಸಿದ್ರಾಮ ವಾಘಮಾರೆ ಮಾತನಾಡಿದರು.

ಗೊಂಧಳಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್ ರಘುನಾಥರಾವ್ ನವಲಕಲೆ, ವಿಜಯಕುಮಾರ ಪಾಂಚಾಂಗೆ, ಗಣೇಶ ಕಾಳೆ, ರವಿ ಪಾಠಕ್, ಜಗನ್ನಾಥರಾವ್‌ ನವಲಕಲೆ, ಮಾಣಿಕರಾವ್ ಕಾಟೆ, ರಾಜವರ್ಧನ ಗರುಡಕರ್, ಅಮೂಲ ಗರುಡಕರ್, ಸುನೀತಾ ಧವಳೆ, ಜ್ಯೋತಿ ಕಾಳೆ, ವೃಷಾ ನವಲಕಲೆ ಇದ್ದರು.

ಮೆರವಣಿಗೆ:
ಸಭೆಯ ನಂತರ ಗೊಂಧಳಿ ಸಮಾಜದವರು ಹಂಗರಗಿ ಫಂಕ್ಷನ್ ಹಾಲ್‌ನಿಂದ ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಆಡಳಿತ ಮಂಡಳಿಯಲ್ಲಿ ಗೊಂಧಳಿ, ಜೋಷಿ ಸಮಾಜದ ಮೂವರಿಗೆ ಸ್ಥಾನ ಕಲ್ಪಿಸಬೇಕು. ಅಯೋಧ್ಯೆ ರಾಮಮಂದಿರದಲ್ಲಿ ಗೊಂಧಳಿ ಸಮಾಜದ ವಾದ್ಯ ನುಡಿಸಲು ಅವಕಾಶ ನೀಡಬೇಕು. ಮಂದಿರದಲ್ಲಿ ಜೋಷಿ ಸಮಾಜದವರಿಗೆ ಜ್ಯೋತಿಷ್ಯ ಶಾಸ್ತ್ರದ ಮಾನ್ಯತೆ ಕೊಡಬೇಕು. ಜಿಲ್ಲೆಯ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಗೊಂಧಳಿ ಸಮಾಜದ ವಾದ್ಯ ನುಡಿಸಲು ಅನುವು ಮಾಡಿಕೊಡಬೇಕು. ಬೀದರ್ ನಗರದಲ್ಲಿ ಗೊಂಧಳಿ, ಜೋಷಿ ಸಮಾಜದವರಿಗೆ ಐದು ಎಕರೆ ಭೂಮಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಗೊಂಧಳಿ ಸಮಾಜದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT