ಮಂಗಳವಾರ, ಆಗಸ್ಟ್ 3, 2021
21 °C
ನದಿ ಪಾತ್ರ ಗ್ರಾಮಗಳ ರೈತರಲ್ಲಿ ಖುಷಿ

ಉತ್ತಮ ಮಳೆ, ಮಾಂಜ್ರಾ ನದಿಗೆ ಜೀವ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಜಿಲ್ಲೆಯ ಗಡಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಜಾಸ್ತಿಯಾಗಿ ನದಿ, ಹಳ್ಳಗಳಿಗೆ ಜೀವ ಕಳೆ ಬಂದಿದೆ.

ಕಳೆದ ನಾಲ್ಕು ತಿಂಗಳಿನಿಂದ ಬರಿದಾಗಿದ್ದ ಜಿಲ್ಲೆಯ ರೈತರ ಜೀವನಾಡಿ ಮಾಂಜ್ರಾ ನದಿ ಮೈದುಂಬಿದೆ. ಇದರಿಂದ ಕುಡಿಯುವ ನೀರು, ಮೇವಿನ ಕೊರತೆ ಎದುರಿಸುತ್ತಿದ್ದ ನದಿ ಪಾತ್ರದ ಜನ ಖುಷಿಪಡುವಂತಾಗಿದೆ.

ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಔರಾದ್ ಪಟ್ಟಣದ ಜನ ಈಗ ನಿರಾಳರಾಗಿದ್ದಾರೆ. ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರು ಬಂದಿರುವುದರಿಂದ ಈಗ ಪಟ್ಟಣದ ಜನತೆಗೆ ಅಲ್ಲಿಂದಲೇ ಪೂರೈಕೆಯಾಗುತ್ತಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಕಳೆದ ಬಾರಿಗಿಂತ ಈ ಸಲ ಉತ್ತಮ ಮಳೆಯಾಗಿದೆ. ಕಳೆದ ಬಾರಿ ಜೂನ್ 30ರ ವರೆಗೆ ತಾಲ್ಲೂಕಿನಾದ್ಯಂತ 138 ಮಿ.ಮೀ ಮಳೆಯಾಗಿತ್ತು. ಈ ಬಾಗಿ 150 ಮಿ.ಮೀ ಮಳೆ ದಾಖಲಾಗಿದೆ.

'ಕಳೆದ ವರ್ಷ ಆಗಸ್ಟ್ ತಿಂಗಳ ವರೆಗೆ ಸರಿಯಾದ ಮಳೆಯಾಗಿರಲಿಲ್ಲ. ಆದರೆ, ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿ ಬಿತ್ತನೆಯೂ ಪೂರ್ಣಗೊಂಡಿದೆ.

ಉದ್ದು, ಹೆಸರು, ಜೋಳದ ಮೊಳಕೆ ನಿರೀಕ್ಷೆಗೂ ಮೀರಿ ಬೆಳೆದಿವೆ. ಆದರೆ, ಸೋಯಾ ಬೀಜ ಸರಿ ಇಲ್ಲದ ಕಾರಣ ರೈತರಿಗೆ ಸಮಸ್ಯೆಯಾಗಿದೆ' ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಅವರು ತಿಳಿಸಿದ್ದಾರೆ.

'ಬೀಜಕ್ಕಾಗಿ ಸರ್ಕಾರದ ಮೇಲೆ ಅವಲಂಬಿಸಿದ ಕಾರಣ ಸೋಯಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲ್ಲೂಕಿನ ಬಹುಪಾಲು ರೈತರ ಸೋಯಾ ಮೊಳಕೆಯೊಡೆದಿಲ್ಲ. ಅವರೆಲ್ಲರೂ ಈಗ ಪುನಃ ಹೆಸರು, ಉದ್ದು ಬಿತ್ತನೆ ಮಾಡಬೇಕಾಗಿದೆ. ಅವರೆಲ್ಲರಿಗೂ ಸರ್ಕಾಋ ಸೂಕ್ತ ಪರಿಹಾರ ನೀಡಬೇಕು. ಮುಂದೆ ಹೀಗಾಗದಂತೆ ಕಾಳಜಿ ವಹಿಸಬೇಕು' ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.