ಮಂಗಳವಾರ, ನವೆಂಬರ್ 19, 2019
29 °C
ವಿ.ಕೆ.ಪಾಟೀಲ ಜನ್ಮದಿನಾಚರಣೆ, ವಾರ್ಷಿಕೋತ್ಸವ

ಉತ್ತಮ ವಿಚಾರಗಳಿಂದ ಉನ್ನತಿ: ಮಾಜಿ ಸಚಿವ ಭೀಮಣ್ಣ ಖಂಡ್ರೆ

Published:
Updated:
Prajavani

ಭಾಲ್ಕಿ: ನಮ್ಮಲ್ಲಿರುವ ಒಳ್ಳೆಯ ಭಾವನೆ, ವಿಚಾರಗಳು ನಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಸತ್ಯದ ಕಾರ್ಯಗಳಿಗೆ ಸದಾ ಬೆಂಬಲವಿದೆ ಎಂದು ಮಾಜಿ ಸಚಿವ ಭೀಮಣ್ಣ ಖಂಡ್ರೆ ನುಡಿದರು.

ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಎಸ್‍ಕೆಪಿ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿ.ಕೆ.ಪಾಟೀಲ ಜನ್ಮದಿನಾಚರಣೆ, ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಭಾಲ್ಕಿಯಲ್ಲಿ ದಲಿತರಿಗೆ ಬಾವಿ ನೀರನ್ನು ತರಲು ಅನುವು ಮಾಡಿಕೊಟ್ಟಿದ್ದ ಲಿಂ ಡಾ.ಚನ್ನಬಸವ ಪಟ್ಟದ್ದೇವರ ಆದರ್ಶ ತತ್ವ, ಕಾರ್ಯಗಳನ್ನು ಎಲ್ಲರೂ ಪಾಲಿಸಿಕೊಂಡು ಬದುಕು ಸಾಗಿಸಬೇಕು ಎಂದು ತಿಳಿ ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ ಎಲ್ಲ ಪಾಲಕರ ಮನ ಗೆದ್ದಿರುವ ಎಸ್‍ಕೆಪಿ ಗುರುಕುಲ ಶಾಲೆ ಉತ್ತಮ  ಪ್ರಗತಿ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗ್ರಾಮೀಣ ಭಾಗದ ಬಡ, ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಶಾಲೆಯ ಧ್ಯೇಯವಾಗಿದೆ. ಶಾಲೆ ತೆರೆಯಲು, ಕಟ್ಟಡ ನಿರ್ಮಿಸಲು ಸ್ಥಳ, ಹಣವನ್ನು ನೀಡಿರುವ ವಿ.ಕೆ.ಪಾಟೀಲ, ನೀಲಮ್ಮ ಪಾಟೀಲ ಸರ್ವರಿಗೂ ಮಾದರಿ ಆಗಿದ್ದಾರೆ ಎಂದು ಅವರು ಹೇಳಿದರು.

ಗುರುಬಸವ ಪಟ್ಟದ್ದೇವರು, ಜಯದೇವ ಗುರೂಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರೆ ಮಾತನಾಡಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ, ವಕೀಲ ಪ್ರಸನ್ನಕುಮಾರ ದೇಶಪಾಂಡೆ, ನೀಲಮ್ಮ ವಿ.ಕೆ.ಪಾಟೀಲ, ಸಿಆರ್‌ಪಿ  ವಿಜಯಕುಮಾರ, ವೈಜಿನಾಥ ರಾಗಾ, ಪ್ರಭುಶೆಟ್ಟಿ ರಾಗಾ, ರಾಜಕುಮಾರ ಪಾಟೀಲ ಅವರು ಇದ್ದರು.

ಶಾಲೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ಮುಖ್ಯಶಿಕ್ಷಕ ಶಂಕರ ನೆಲವಾಡೆ ವಾರ್ಷಿಕ ವರದಿ ಓದಿದರು.
ಶಿವಕುಮಾರ ನಿರೂಪಿಸಿದರು. ರಾಜಕುಮಾರ ವಂದಿಸಿದರು.

ಪ್ರತಿಕ್ರಿಯಿಸಿ (+)