ಶುಕ್ರವಾರ, ನವೆಂಬರ್ 15, 2019
20 °C
ಬಿಜೆಪಿ ಯುವ ಮೋರ್ಚಾ ಸಂಕಲ್ಪ

ಗೋರಟಾ: ಸಾಕಾರಗೊಳ್ಳದ ಹುತಾತ್ಮರ ಸ್ಮಾರಕ

Published:
Updated:
Prajavani

ಬೀದರ್‌: ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಹೋರಾಟ ನಡೆಸಿದವರ ಸ್ಮರಣೆಗಾಗಿ ಬಿಜೆಪಿ ಯುವ ಮೋರ್ಚಾ ಬಸವಕಲ್ಯಾಣ ತಾಲ್ಲೂಕಿನ ಗೋರಟಾದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ‘ಹುತಾತ್ಮರ ಸ್ಮಾರಕ’ ಯೋಜನೆ ನನೆಗುದಿಗೆ ಬಿದ್ದಿದೆ.

ರಾಜ್ಯ ಸರ್ಕಾರ ಸೆಪ್ಟೆಂಬರ್‌ 17ರಂದು ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲು ಅದೇಶ ಹೊರಡಿಸಿದರೂ ಸ್ಮಾರಕ ನಿರ್ಮಾಣದ ಉತ್ಸಾಹ ಮರುಜೀವ ಪಡೆದಿಲ್ಲ.

ಹೈರದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ನೆನಪಿಗಾಗಿ ಗೋರಟಾದಲ್ಲಿ
2014ರ ಸೆಪ್ಟೆಂಬರ್ 17ರಂದು ಸರ್ದಾರ್‌ ವಲ್ಲಭಭಾಯಿ ಪಟೇಲ್ ಸ್ಮಾರಕ ನಿರ್ಮಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಶಂಕುಸ್ಥಾಪನೆ ನೆರವೇರಿಸಿದ್ದರು. ಮರು ವರ್ಷವೇ ನರೇಂದ್ರ ಮೋದಿ ಅವರಿಂದ ಸ್ಮಾರಕ ಉದ್ಘಾಟನೆಯ ಯೋಜನೆ ರೂಪಿಸಲಾಗಿತ್ತು.

ಗೋರಟಾ ವಲಯದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿಯೇ ಮೂರು ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಎರಡು ಎಕರೆ ಭೂಮಿಯ ಪೈಕಿ ಒಂದು ಎಕರೆಯಲ್ಲಿ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗಿದೆ. ಒಂದು ಎಕರೆ ಜಾಗ ವಿವಾದದಲ್ಲಿದೆ.

ಕಾಮಗಾರಿ ಸ್ಥಳದಲ್ಲಿ ಹುಲ್ಲು ಬೆಳೆದಿದೆ. 2014ರಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪಿ.ಮುನಿರಾಜು ಗೌಡ ಇದರ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಅವಧಿ ಮುಗಿದ ನಂತರ ಬಿಜೆಪಿ ಮುಖಂಡರು ಮೌನಕ್ಕೆ ಜಾರಿದರು. ಪ್ರತಾಪ ಸಿಂಹ ಅವರು ಯುವ ಮೋರ್ಚಾದ ಅಧ್ಯಕ್ಷರಾದರೂ ಇದರ ಬಗ್ಗೆ ಆಸಕ್ತಿ ತೋರಿಸಿಲ್ಲ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯದಾದ್ಯಂತ ಸಂಚರಿಸಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕಾಗಿಯೇ ಪ್ರತಿಯೊಬ್ಬರಿಂದ ₹10 ಸಂಗ್ರಹಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರಹ್ಲಾದ್‌ ಜೋಶಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಭಿಯಾನದಲ್ಲಿ ಸಂಗ್ರಹವಾಗಿದ್ದ ಹುತಾತ್ಮರ ಸ್ಮಾರಕ ನಿಧಿಯನ್ನು ಅರ್ಪಿಸಿದ್ದರು. 

ಈಗಾಗಲೇ ಬೆಳಗಾವಿಯಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 32 ಅಡಿ ಎತ್ತರದ ಮೂರ್ತಿ ಸಿದ್ಧವಾಗಿದೆ. ಗೋರಟಾದಲ್ಲಿ ಧ್ವಜಸ್ತಂಭ ಮತ್ತು ಜ್ಯೋತಿ ಸ್ತಂಭ ಮಾತ್ರ ನಿರ್ಮಾಣಗೊಂಡಿದೆ. ಬೇರೆ ಯಾವುದೇ ಕಾಮಗಾರಿ ಅಲ್ಲಿ ನಡೆದಿಲ್ಲ. ಸ್ಮಾರಕಕ್ಕಾಗಿಯೇ ಸಿದ್ಧಪಡಿಸಿದ ಶಿಲೆಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಸಲಾಕೆಗಳು ತುಕ್ಕು ಹಿಡಿದಿವೆ.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಹಾಗೂ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ ಅವರ ಗಮನ ಸೆಳೆಯಲಾಗಿದೆ. ಸ್ಮಾರಕ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಮರು ಜೀವ ಪಡೆದುಕೊಳ್ಳಲಿದೆ’ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಗುರುನಾಥ ರಾಜಗೀರಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಘೋಷಣೆ ಮಾಡಿದರೆ ಸಾಲದು. ಸ್ಮಾರಕಗಳನ್ನೂ ಅಭಿವೃದ್ಧಿ ಪಡಿಸಬೇಕು. ನಾಡಿನ ಜನರಿಗೆ ಇತಿಹಾಸ ಪರಿಚಯಿಸಬೇಕು’ ಎಂದು ಹುತಾತ್ಮ ಸ್ಮಾರಕ ಹೋರಾಟ ಸಮಿತಿ ಅಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)