7
ಮಹಾದಾಸೋಹಿ ರೇವಪ್ಪಯ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ

ವಿಶಿಷ್ಟ ‘ಹೋಳಿಗೆ ತುಪ್ಪ’ದ ಜಾತ್ರೆ ಸಂಭ್ರಮ

Published:
Updated:

ಕಮಲನಗರ: ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ–ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ್ಯ. ಆದರೆ, ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಖೇಡ್‌ ಗ್ರಾಮದಲ್ಲಿ ಮಂಗಳವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವದಗಿಯ ರೇವಪ್ಪಯ್ಯ ಸ್ವಾಮಿ ಗುರುಪೂಜಾ ನಿಮಿತ್ತ ‘ಹೋಳಿಗೆ–ತುಪ್ಪ’ದ್ದೇ ಜಾತ್ರೆ ನಡೆದಿದ್ದು ವಿಶೇಷ ಎನಿಸಿದೆ.

ಹದಿಮೂರು ವರ್ಷಗಳಿಂದ ಕಾರಹುಣ್ಣಿಮೆಯಾದ ಆರನೇ ದಿನಕ್ಕೆ ಖೇಡ್‌ ಗ್ರಾಮದಲ್ಲಿ ಈ ಹೋಳಿಗೆ–ತುಪ್ಪದ ಜಾತ್ರೆ ಜರುಗುತ್ತದೆ. ಈ ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಬಂದವರಿಗೆಲ್ಲಾ ಮುಂಜಾನೆಯಿಂದ ಇಳಿಹೊತ್ತಿನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಿ ಪಡಿಸುತ್ತಾರೆ ಖೇಡ್‌ ಗ್ರಾಮಸ್ಥರು.

‘ಈ ಸಲ ಹೈದರಾಬಾದ್‌ನಿಂದ 15 ಕೆ.ಜಿ 55 ಡಬ್ಬಿ ತುಪ್ಪ ಹಾಗೂ 950 ಕೆ.ಜಿ ಕಡಲೆ ಬೇಳೆಯನ್ನು ದಾಸೋಹಕ್ಕಾಗಿ ತಂದಿದ್ದೇವೆ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು. ಖೇಡ್‌ ಗ್ರಾಮದಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಂಡು ಹೋದ ಮಹಿಳೆಯರು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೇ ಜಾತ್ರೆಗೆ ಬರುತ್ತಾರೆ. ಹೀಗಾಗಿ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ. ಜಾತ್ರೆಗೆ ಸುಮಾರು 25 ಸಾವಿರ ಭಕ್ತರು ಸೇರಿದ್ದರು ಎಂದು ಅಂದಾಜಿಸಲಾಗಿದೆ. ಸಂಗಮ್‌ ಗ್ರಾಮದಿಂದ ರಸ್ತೆಯುದ್ದಕ್ಕೂ ಜೀಪ್‌, ಟಂಟಂ, ಟೆಂಪೊ, ಮೋಟಾರ್‌ ಸೈಕಲ್‌, ಕಾರುಗಳ ಸಂಚಾರ ವ್ಯಾಪಕವಾಗಿತ್ತು.

ಜಾತ್ರೆಯಲ್ಲಿ ವಿಭೂತಿ, ರುದ್ರಾಕ್ಷಿ, ತೆಂಗು, ಕರಿದ ತಿಂಡಿ ತಿನಸುಗಳ ಹಾಗೂ ಮಕ್ಕಳ ಆಟಿಕೆಗಳ ಅಂಗಡಿಗಳು ಜನರಿಂದ ತುಂಬಿದ್ದವು. ಜಾತ್ರೆಗೂ ಮೊದಲು ಐದು ದಿನಗಳ ಕಾಲ ತಡೋಳಾದ ಮೆಹಕರ್‌ ಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಗ್ರಾಮಸ್ಥರಿಗೆ ಬೆಳಿಗ್ಗೆ ಇಷ್ಟಲಿಂಗ ಪೂಜೆ, ಜಪ, ಧ್ಯಾನದ ಕುರಿತು ಪ್ರಯೋಗಾತ್ಮಕ ಪ್ರಶಿಕ್ಷಣ ಹಾಗೂ ಸಂಜೆ ವಚನ ಪ್ರವಚನವನ್ನು ನೀಡಿದ್ದಾರೆ.

‘ಗ್ರಾಮೀಣ ಭಾಗದ ಸಂಸ್ಕೃತಿಯ ಪ್ರತೀಕವೇ ಹೋಳಿಗೆ–ತುಪ್ಪದ ಜಾತ್ರೆ’ ಎಂದು ಶಿವಾಚಾರ್ಯರು ವ್ಯಾಖ್ಯಾನಿಸಿದರು. ಈ ಜಾತ್ರೆಯಲ್ಲಿ ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೇ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಂಡು ಸಂಭ್ರಮಸುತ್ತಾರೆ.

ಭಾಲ್ಕಿ ತಾಲ್ಲೂಕಿನ ನಾವದಗಿಯ ರೇವಪ್ಪಯ್ಯನವರು ಖೇಡ್‌ ಗ್ರಾಮದಲ್ಲಿ ತಪಸ್ಸಿಗಾಗಿ ಕುಳಿತ್ತಿದ್ದರು ಎನ್ನಲಾಗಿದೆ. ಅದೇ ಸ್ಥಳದಲ್ಲಿ ಗ್ರಾಮಸ್ಥರು ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ನಾವದಗಿಯ ರೇವಪ್ಪಯ್ಯನವರು ತಮ್ಮ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆಯ ಸಂಸ್ಕಾರವನ್ನು ನೀಡುತ್ತ ಗ್ರಾಮ ಗ್ರಾಮಗಳಲ್ಲಿ ಹೋಳಿಗೆ–ತುಪ್ಪದ ದಾಸೋಹ ಕಾರ್ಯವನ್ನು ಮಾಡಿಸುತ್ತಲಿದ್ದರು ಎನ್ನಲಾಗಿದೆ.

ಮಹಾ ತಪಸ್ವಿ ರೇವಪ್ಪಯ್ಯ ಸ್ವಾಮಿ ಅವರ ದಾಸೋಹ ಕಾರ್ಯವನ್ನು ಹದಿಮೂರು ವರ್ಷಗಳಿಂದ ಖೇಡ್‌ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.
ಪ್ರಶಾಂತ್‌ ಜಿ. ಮಠಪತಿ

ರೇವಪ್ಪಯ್ಯ ಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿ ಕೈಗೊಂಡ ಹೋಳಿಗೆ ತುಪ್ಪದ ದಾಸೋಹ ಕಾರ್ಯವನ್ನು ಖೇಡ್‌ ಗ್ರಾಮಸ್ಥರು ಇಲ್ಲಿಯವರೆಗೂ ಶ್ರದ್ಧೆ, ಭಕ್ತಿಯಿಂದ ಮುಂದುವರಿಸಿದ್ದೇವೆ.
– ಮಲ್ಲಪ್ಪಾ ದಾನಾ, ಗ್ರಾಮಸ್ಥ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !