ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸುಣ್ಣಬಣ್ಣ ಕಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ

2 ಸಾವಿರ ವಿದ್ಯಾರ್ಥಿಗಳಿದ್ದರೂ ಕುಡಿಯುವ ನೀರಿಲ್ಲ; ಕೆಟ್ಟು ನಿಂತ ಶೌಚಾಲಯಗಳು
Last Updated 20 ಡಿಸೆಂಬರ್ 2021, 13:38 IST
ಅಕ್ಷರ ಗಾತ್ರ

ಬೀದರ್: ನಗರದ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವಿದೆ. ಆದರೆ, ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಕಾಲೇಜು ಕಟ್ಟಡ ಕಳೆಗುಂದಿದ್ದು, ಆಕರ್ಷಣೆ ಕಳೆದುಕೊಂಡಿದೆ. ಇದಕ್ಕೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುವುದರಿಂದ ಅವರ ಸಹಕಾರ ಪಡೆದು ಹೊಸ ರೂಪ ನೀಡುವಂತೆ ಉನ್ನತ ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಅಧಿಕಾರಿಗಳು ಮಾತ್ರ ಇಂದಿಗೂ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.

1974ರಲ್ಲಿ ನಿರ್ಮಿಸಿದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಒಟ್ಟು 1,800 ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 180 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕಾರಣ ಔರಾದ್, ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನ ಅನೇಕ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.

ಕಾಲೇಜಿನ ಆವರಣದಲ್ಲಿ ಮೂರು ಕೊಳವೆ ಬಾವಿಗಳಿದ್ದರೂ ಕೆಟ್ಟು ನಿಂತಿವೆ. ಶೌಚಾಲಯಗಳಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಕಾಲೇಜಿಗೆ ಬಂದು ಸಂಜೆ ಮನೆಗೆ ಹೋಗುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲೇಜು ಹಿಂಬದಿಯಲ್ಲಿರುವ ಪೊದೆಗಳ ಮರೆಗೆ ಹೋಗಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯ ಎದುರಾಗಿದೆ.

ಕಟ್ಟಡದ ಮೇಲೆ ಗಿಡಗಳು ಬೆಳೆದು ನಿಂತಿವೆ. ಅನೇಕ ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಕಟ್ಟಡದಲ್ಲಿ ದೂಳು ತುಂಬಿಕೊಂಡಿದೆ. ಕೊಠಡಿಗಳಲ್ಲೂ ಅಲ್ಲಲ್ಲಿ ಜೇಡ ಬಲೆ ಕಟ್ಟಿದೆ. ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಅಲ್ಲಿ ಪಿಠೋಪಕರಣಗಳು ಇಲ್ಲ. ಹಳೆಯ ಕಟ್ಟಡದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಜಾಗ ಇಲ್ಲ. ಒಟ್ಟಾರೆ ಸಮಸ್ಯೆಯ ಗೂಡಾಗಿದೆ ಕಾಲೇಜು ಕಟ್ಟಡ.

ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಇರುವ ಹೊಸ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಕೆಲ ಮಹಡಿಯ ಟೈಲ್ಸ್‌ಗಳು ಆಗಲೇ ಕಿತ್ತು ಹೋಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಮಹಡಿಯಲ್ಲಿ ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹಿಸಿ ಇಡಲಾಗಿದೆ. ಮೈದಾನದಲ್ಲಿ ಕಲ್ಲುಗಳು ತುಂಬಿಕೊಂಡಿವೆ. ವಿದ್ಯಾರ್ಥಿಗಳಿಗೆ ಆಟದ ಮೈದಾನ ಇಲ್ಲದಂತಾಗಿದೆ.

ಕಾಲೇಜಿಗೆ ಸೇರಿದ ಜಾಗವನ್ನು ಖಾಸಗಿಯವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಒಳಚರಂಡಿ ಕಾಮಗಾರಿಯ ಸಂದರ್ಭದಲ್ಲಿ ಜೆಸಿಬಿಯಿಂದ ಆವರಣ ಗೋಡೆ ಕೆಡವಲಾಗಿದ್ದು, ಮತ್ತೆ ದುರಸ್ತಿ ಮಾಡಿಲ್ಲ. ಕಾಲೇಜಿನ ಪ್ರವೇಶ ದ್ವಾರದಲ್ಲಿದ್ದ ಆವರಣ ಗೋಡೆಯೂ ಬಿದ್ದಿದೆ. .

ಸರ್ಕಾರ ಸ್ವಚ್ಛ ಭಾರತ ಅಭಿಯಾನ ನಡೆಸುತ್ತಿದೆ. ಅಧಿಕಾರಿಗಳು ಇಲ್ಲಿಯ ಶೌಚಾಲಯಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಲು ಸಿದ್ಧರಿಲ್ಲ. ಕಾಲೇಜಿನಲ್ಲಿ ಬಯಲು ಶೌಚದ ಪ್ರಾಯೋಗಿಕ ಪಾಠ ಕಲಿಯುತ್ತಿದ್ದೇವೆ ಎಂದು ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರ ಗೋಳು ಕೇಳುವವರಿಲ್ಲ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಅನಿವಾರ್ಯ ಸಂದರ್ಭದಲ್ಲಿ ಕೇಂದ್ರ ಬಸ್‌ ನಿಲ್ದಾಣ ಇಲ್ಲವೆ ನೇರವಾಗಿ ಮನೆಗೆ ಹೋಗಬೇಕಾದ ಸ್ಥಿತಿ ಇದೆ. ವಿದ್ಯಾರ್ಥಿನಿಯರು ನಾಚಿಕೆಯಿಂದ ಏನನ್ನೂ ಹೇಳಲು ಮುಂದೆ ಬರುತ್ತಿಲ್ಲ. ಕಾಲೇಜು ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕ ರಹೀಂ ಖಾನ್‌ ಅವರೇ ಕಾಲೇಜಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಒಮ್ಮೆಯೂ ಸಭೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿಲ್ಲ. ಕಾಲೇಜು ಸುಧಾರಣೆಗೂ ಸ್ಪಂದಿಸುತ್ತಿಲ್ಲ. ಕಾಲೇಜಿನಲ್ಲಿ ನೀರಿಲ್ಲದ ಕಾರಣ ಅನೇಕ ಬಾರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೇಳುವವರೇ ಇಲ್ಲ’ ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ನಾಟೇಕರ್‌ ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ರೂಪಾಯಿ ಶುಲ್ಕ ಪಾವತಿಸುವ ಸಾಮರ್ಥ್ಯ ನಮಗಿಲ್ಲ. ಪ್ರಾಧ್ಯಾಪಕರು ಒಳ್ಳೆಯ ರೀತಿಯಲ್ಲಿ ಪಾಠ ಮಾಡುತ್ತಾರೆ ಎನ್ನುವ ಕಾರಣಕ್ಕೆ ಪ್ರಥಮ ದರ್ಜೆ ಕಾಲೇಜಿಗೆ ನಮ್ಮ ಮಕ್ಕಳನ್ನು ಕಳಿಸುತ್ತಿದ್ದೇವೆ. ಆದರೆ, ಮೂಲಸೌಕರ್ಯ ಕಲ್ಪಿಸಿಲ್ಲ. ಅಧಿಕಾರಿಗಳು ತಮ್ಮ ಕೊಠಡಿಗೆ ಹೊಂದಿಕೊಂಡು ಶೌಚಾಲಯ ಕಟ್ಟಿಸಿಕೊಳ್ಳುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರೂ ನೀರಿನ ವ್ಯವಸ್ಥೆ ಮಾಡಲು ಸಿದ್ಧವಿಲ್ಲ ಎಂದು ವಿದ್ಯಾರ್ಥಿನಿಯರ ಪಾಲಕರಾದ ರಮೇಶ ಹಾಗೂ ಘಾಳೆಪ್ಪ ಅಸಮಾಧಾನ ಹೊರ ಹಾಕಿದರು.

ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕ ಇದೆ. ವಿದ್ಯಾರ್ಥಿಗಳನ್ನೇ ಬಳಸಿಕೊಂಡು ತಿಂಗಳಲ್ಲಿ ಒಂದು ಬಾರಿಯಾದರೂ ಆವರಣ ಸ್ವಚ್ಛಗೊಳಿಸಬಹುದು. ಸ್ವಚ್ಛ ಭಾರತದ ಬಗ್ಗೆ ತಿಳಿವಳಿಕೆ ಕೊಡಬೇಕಾದವರೂ ಕೊಳಚೆಯಲ್ಲೇ ಉರುಳಾಡುವುದನ್ನು ಹೇಳಿಕೊಡುವಂತಾಗಬಾರದು ಎಂದು ಪಾಲಕ ಶಿವಕುಮಾರ ಪಾಟೀಲ ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT